2002ರಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನಿಂದ ಭಾರತವನ್ನು ರಕ್ಷಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್!

ಬೆಂಗಳೂರು: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಇನ್ನು 2002ರಲ್ಲಿ ಟೀಂ ಇಂಡಿಯಾದ ‘ಗೋಡೆ’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಹೀನಾಯ ಸೋಲಿನಿಂದ ತಂಡವನ್ನು ರಕ್ಷಿಸಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ವೀರೇಂದ್ರ ಸೆಹ್ವಾಗ್ ರ ಶತಕದ ನೆರವಿನಿಂದ 357 ರನ್ ಗಳಿಗೆ ಆಲೌಟ್ ಆಗಿತ್ತು. ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ದ್ರಾವಿಡ್ ಕೇವಲ 13 ರನ್ ಗಳಿಗೆ ಆಲೌಟ್ ಆಗಿದ್ದರು.
ಭಾರತ ಆಲೌಟ್ ನಂತರ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ವಾಘನ್ ಅವರ 197 ರನ್ ಗಳ ಸಹಾಯದಿಂದ 617 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಇಂಗ್ಲೆಂಡ್ 260 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿತ್ತು. 260 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ 0, ವಾಸೀಂ ಜಾಫರ್ 5 ರನ್ ಗಳಿಗೆ ಔಟಾಗಿದ್ದರು. 11 ರನ್ ಗಳಿಗೆ ಪ್ರಮುಖ 2 ವಿಕೆಟ್ ಗಳನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ಆಸರೆಯಾಗಿದ್ದು ರಾಹುಲ್ ದ್ರಾವಿಡ್ ಚಲದಂಕ ಮಲ್ಲನಂತೆ ಬ್ಯಾಟಿಂಗ್ ಮಾಡಿದ್ದ ಅವರು 115 ರನ್ ಬಾರಿಸಿದ್ದರು. ಇದರಿಂದ  ಭಾರತ 8 ವಿಕೆಟ್ ನಷ್ಟಕ್ಕೆ 424 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಅಂತೂ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.
ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದಾಗ ರಾಹುಲ್ ದ್ರಾವಿಡ್ ಅವರು ಕಣಕ್ಕಿಳಿದು ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜತೆ ಬೃಹತ್ ಇನ್ನಿಂಗ್ಸ್ ಕಟ್ಟಿದ್ದರು. ಇದರಿಂದಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಡ್ರಾ ಆಗಿದ್ದು ಇನ್ನು ಉಭಯ ತಂಡಗಳು 1-1 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರಿಂದ ಸರಣಿ ಸಮಗೊಂಡಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ