ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತ: ಸಚಿವ ಆರ್.ವಿ.ದೇಶಪಾಂಡೆ

Karnataka Medical Education Minister Sharan Prakash R Patil and Karnataka Higher Education Minister R V Deshpande declares CET results in Bangalore on May 27, 2014. (Photo: IANS)

 

ಬೆಂಗಳೂರು, ಜು.3- ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ರಾಜ್ಯದ ಯಾತ್ರಾರ್ಥಿಗಳು ಇದುವರೆಗೆ ಸುರಕ್ಷಿತವಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ವಿಶ್ವೇಶ್ವರಹೆಗಡೆ ಕಾಗೇರಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಭಾರೀ ಮಳೆಯಿಂದಾಗಿ ಯಾತ್ರಾರ್ಥಿಗಳಿಗೆ ತೊಂದರೆಯಾಗಿರುವುದು ನಿಜ. ಯಾತ್ರೆಗೆ ತೆರಳಿದ್ದ 525 ಯಾತ್ರಾರ್ಥಿಗಳ ಪೈಕಿ ನಮ್ಮ ರಾಜ್ಯದ 250 ಯಾತ್ರಾರ್ಥಿಗಳಿದ್ದು, ಅವರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.

ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣೆಗೆ ದಾವಿಸುವಂತೆ ಕೇಂದ್ರದ ಗೃಹ ಇಲಾಖೆ, ವಿದೇಶಾಂಗ ವ್ಯವಹಾರಗಳ ಇಲಾಖೆಗೂ ಮನವಿ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಾರೀ ಮಳೆಯಿಂದಾಗಿ ಹೆಲಿಕಾಫ್ಟರ್ ಬಳಸಲು ಸಾಧ್ಯವಾಗುತ್ತಿಲ್ಲ. ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕೂಡ ಈ ಯಾತ್ರಾರ್ಥಿಗಳ ದಾವಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ನೇಪಾಳದ ಸೇನಾ ಹೆಲಿಕಾಫ್ಟರ್ ಮೂಲಕ ಅನಾರೋಗ್ಯಕ್ಕೊಳಗಾದವರು, ವಯಸ್ಸಾದವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಪ್ರಯತ್ನ ಮಾಡುವಂತೆ ಅಲ್ಲಿರುವ ನಮ್ಮ ರಾಯಭಾರಿಗೆ ಕೋರಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿ ಯಾತ್ರಾರ್ಥಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

ಕಂದಾಯ ಇಲಾಖೆ ಪ್ರಕೃತಿ ವಿಕೋಪ ಕಾರ್ಯದರ್ಶಿಗೂ ಯಾತ್ರಾರ್ಥಿಗಳ ರಕ್ಷಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅಮರನಾಥ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳು ಅತಿಯಾದ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದ ಸದಸ್ಯರು, ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದು, ಇದೊಂದು ಗಂಭೀರವಾದ ವಿಚಾರವಾಗಿದೆ. ಯಾತ್ರಾರ್ಥಿಗಳಿಗೆ ಊಟ ವಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಅವರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ ಒದಗಿಸುವಂತೆ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ