ಆಡಳಿತ ಪಕ್ಷದ ಹಾಜರಾತಿ ಕಡಿಮೆಗೆ ಸಭಾಧ್ಯಕ್ಷ ರಮೇಶ್‍ಕುಮಾರ್ ಅಸಮಾಧಾನ

 

ಬೆಂಗಳೂರು, ಜು.3- ರಾಜ್ಯ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು ಸದನದ ಆರಂಭದಲ್ಲಿ ಆಡಳಿತ ಪಕ್ಷದ ಹಾಜರಾತಿ ಕಡಿಮೆ ಇರುವುದನ್ನು ಗಮನಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಸೂಕ್ಷ್ಮವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಅಧಿವೇಶನಕ್ಕೆ ಹೊಸ ಸದಸ್ಯರು ಸಾಕಷ್ಟು ಮಂದಿ ಬಂದಿದ್ದಾರೆ. ಅವರಿಗೆ ಸದನದ ಕಾರ್ಯಕಲಾಪಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಸದಸ್ಯರ ಹಾಜರಾತಿಯ ಕೊರತೆ ಒಳ್ಳೆಯ ಸಂದೇಶವಲ್ಲ ಎಂದು ಹೇಳಿದರು.

ನೋಟಿಸ್ ನೀಡದೆ ಸದಸ್ಯರು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಹಾಗೂ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲು ಮುಕ್ತ ಅವಕಾಶವಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ಚರ್ಚೆಯ ವಿಚಾರಗಳನ್ನು ಸರ್ಕಾರದ ಅಧಿಕಾರಿಯೊಬ್ಬರು ಟಿಪ್ಪಣಿ ಮಾಡಿಕೊಂಡು ಆನಂತರ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆಂದು ಸಭಾನಾಯಕರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಭಾಧ್ಯಕ್ಷರು ಸಲಹೆ ಮಾಡಿದರು.
ಸದನದ ಆರಂಭದಲ್ಲಿ ವಿರೋಧಪಕ್ಷದ ಸದಸ್ಯರಿಗಿಂತ ಆಡಳಿತ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರು ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವಕ್ಕೆ ಅವಕಾಶ ಮಾಡಿಕೊಟ್ಟರು.
ಕಾಂಗ್ರೆಸ್ ಪಕ್ಷದ ಸದಸ್ಯ ಈಶ್ವರ್ ಬಿ ಖಂಡ್ರೆ ಅವರು, ನಿನ್ನೆ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ದಯಪಾಲಿಸಿದ ಭಾಷಣಕ್ಕಾಗಿ ಈ ಅಧಿವೇಶನದಲ್ಲಿ ಸೇರಿರುವ ವಿಧಾನಸಭೆಯ ಸದಸ್ಯರಾದ ನಾವು ರಾಜ್ಯಪಾಲರಿಗೆ ಕೃತಜ್ಞಾಪೂರ್ವಕವಾದ ವಂದನೆಗಳನ್ನು ಸಮರ್ಪಿಸಲು ಅಪ್ಪಣೆ ಕೋರುತ್ತೇವೆ ಎಂದು ಸೂಚಿಸಿದರು. ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಈ ಪ್ರಸ್ತಾವವನ್ನು ಅನುಮೋದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ