ನೈಸ್ ಸಂಸ್ಥೆ ನಿರ್ಮಾಣ ಮಾಡಿರುವ ಬಿಎಂಐಸಿ ಯೋಜನೆ ವಿರುದ್ಧ ಕ್ರಮ

 

ಬೆಂಗಳೂರು, ಜು.3- ಮೈಸೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ನೈಸ್ ಸಂಸ್ಥೆ ನಿರ್ಮಾಣ ಮಾಡಿರುವ ಬಿಎಂಐಸಿ ಯೋಜನೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಇಕ್ಕಟ್ಟಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಲುಕಿದ್ದಾರೆ.
ಕಳೆದ ಒಂದು ದಶಕಗಳಿಂದ ಭಾರೀ ಸದ್ದು ಮಾಡುತ್ತಿರುವ ಬಿಎಂಐಸಿ ಯೋಜನೆ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಲಾಗಿತ್ತು. ಮಾಜಿ ಶಾಸಕ ಅಶೋಕ್ ಖೇಣಿ ಮುಖ್ಯಸ್ಥರಾಗಿರುವ ನೈಸ್ ಸಂಸ್ಥೆಯು ಬಿಎಂಐಸಿ ಯೋಜನೆಯಲ್ಲಿ ಸುಮಾರು 1350ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರವನ್ನು ನಡೆಸಿದೆ ಎಂದು ಸಮಿತಿ ಪತ್ತೆ ಮಾಡಿತ್ತು.

ಈಗ ಈ ವರದಿಯನ್ನು ಮುಂದಿಟ್ಟುಕೊಂಡು ಬಜೆಟ್ ಅಧಿವೇಶನದಲ್ಲಿ ದೋಸ್ತಿ ಸರ್ಕಾರದ ವಿರುದ್ಧ ಮುಗಿ ಬೀಳಲು ಬಿಜೆಪಿ ಸಜ್ಜಾಗಿದೆ. ಇದು ಕುಮಾರಸ್ವಾಮಿ ಅವರಿಗೆ ಉಗುಳಲೂ ಆಗದ ಹಾಗೂ ನುಂಗಲೂ ಆಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಏಕೆಂದರೆ ಯೋಜನೆ ವಿರುದ್ಧ ಸದನದಲ್ಲಿ ಅಂದು ಕುಮಾರಸ್ವಾಮಿಯವರೇ ಸಾಕಷ್ಟು ಆರೋಪ ಮಾಡಿದ್ದರು. ಬಿಎಂಐಸಿ ಯೋಜನೆಯನ್ನು ಸಂಪೂರ್ಣವಾಗಿ ರದ್ದು ಪಡಿಸಿ ನೈಸ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸದನದಲ್ಲಿ ಒತ್ತಾಯ ಮಾಡಿದ್ದರು.
ಅನೇಕ ಬಾರಿ ಈ ಯೋಜನೆ ಬಗ್ಗೆ ಜೆಡಿಎಸ್ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗಿದ್ದರು. ಅಲ್ಲದೆ ಕೆಲವು ಸಂದರ್ಭದಲ್ಲಿ ಬೀದಿಯಲ್ಲಿ ನಿಂತು ರೈತರ ಪರವಾಗಿ ಪ್ರತಿಭಟನೆಯನ್ನೂ ನಡೆಸಿದ್ದರು.
ನೈಸ್ ಸಂಸ್ಥೆ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಿದೆ ಎಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದರಿಂದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು.
ಈ ಸಮಿತಿಯಲ್ಲಿ ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಸ್.ಆರ್.ವಿಶ್ವನಾಥ್, ಸತೀಶ್‍ರೆಡ್ಡಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರಿದ್ದರು.

ಶಿಫಾರಸುಗಳೇನು:
2014ರಿಂದ 2016ರವರೆಗೆ ಬಿಎಂಐಸಿ ಯೋಜನೆಯ ಅಕ್ರಮಗಳನ್ನು ಸತತ ಎರಡು ವರ್ಷಗಳ ಕಾಲ ತನಿಖೆ ನಡೆಸಿದ ಸಮಿತಿಯು ಅಂತಿಮವಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ವರದಿ ಮಂಡಿಸಿತ್ತು.ಈ ವರದಿಯಲ್ಲಿ ಸರ್ಕಾರಕ್ಕೆ ಸಮಿತಿಯು ಅನೇಕ ಶಿಫಾರಸುಗಳನ್ನು ಮಾಡಿತ್ತು.
* ನೈಸ್ ಅಕ್ರಮದ ಬಗ್ಗೆ ಸಿಬಿಐ ಇಲ್ಲವೇ ಇಡಿ ತನಿಖೆ
* ಯೋಜನೆಗೆ ನೀಡಿದ್ದ 11,660 ಎಕರೆ ಜಮೀನು ವಾಪಸ್ ಪಡೆಯುವುದು
* 2008ರಿಂದ 2014ರವರೆಗೆ ಅಕ್ರಮವಾಗಿ ಸಂಗ್ರಹಿಸಿರುವ 1350 ಕೋಟಿ ಟೋಲ್ ವಸೂಲಿ
* ಅಕ್ರಮ ಒಪ್ಪಂದದಿಂದ 4956 ಕೋಟಿ ಗೋಲ್‍ಮಾಲ್
* ಕಾಂಕ್ರೀಟ್ ರಸ್ತೆ ಬದಲಿಗೆ ಡಾಂಬರ್ ರಸ್ತೆ ನಿರ್ಮಾಣ
* ಒಪ್ಪಂದ ಗಾಳಿಗೆ ತೂರಿ ಜಮೀನು ಮಾರಾಟ
ಹೀಗೆ ಸದನ ಸಮಿತಿಯು ನೈಸ್ ಸಂಸ್ಥೆಯ ಅಕ್ರಮಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿತ್ತು. ಅಂದು ಈ ಸಂಸ್ಥೆಯ ವಿರುದ್ಧ ಗುಡುಗಿದ್ದ ಕುಮಾರಸ್ವಾಮಿ ಅವರು ಕ್ರಮ ಕೈಗುಳ್ಳುವರೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ