ಚನ್ನಪಟ್ಟಣ, ಜು.2- ಇಂದು ಬೆಳಗ್ಗೆ ಕೆಎಸ್ಐಸಿ ಕಾರ್ಖಾನೆ ಮತ್ತು ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಚಿವ ಸಾ.ರಾ.ಮಹೇಶ್ ಅವರು ಆಗಮಿಸುತ್ತಿದ್ದಂತೆ ರೈತರು ಆವೇಶಗೊಂಡು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಸಮಸ್ಯೆಗಳನ್ನು ಯಾರು ಕೇಳುವವರೇ ಇಲ್ಲ. ಸ್ಥಾನದಲ್ಲಿದ್ದಾಗ ಮಾತ್ರ ಬರುತ್ತೀರಾ, ಹೋಗುತ್ತೀರಾ. ಹಲವಾರು ರೇಷ್ಮೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಷ್ಮೆ ಗೂಡಿಗೆ ಬೆಲೆ ಕಡಿಮೆಯಾದಾಗ ಬರುವುದಿಲ್ಲ. ರೇಷ್ಮೆ ಗೂಡಿಗೆ ಬೆಂಬಲ ಬೆಲೆ ನಿಗದಿಪಡಿಸಿ ಎಂದು ರೈತರು ಪಟ್ಟು ಹಿಡಿದರು. ಈ ವೇಳೆ ರೈತರನ್ನು ಸಮಾಧಾನಪಡಿಸಿದ ಸಚಿವರು, ಇದು ರೈತರ ಸರ್ಕಾರ. ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರ. ರೈತರಿಗೆ ಯಾವುದೇ ಸಮಸ್ಯೆ ಬರದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಅಧಿಕಾರಿಗಳಿಂದ ಮಾಹಿತಿ ಪಡೆದು ರೇಷ್ಮೆ ಗೂಡಿಗೆ ನಿಗದಿತ ದರ ಹಾಗೂ ಬೆಂಬಲ ಬೆಲೆ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸಚಿವರ ಮಾತಿಗೆ ಮಣಿಯದ ರೈತರು, ಬಂದಾಗ ಮಾತ್ರ ಈ ರೀತಿ ಹೇಳಿ ಹೋಗುತ್ತೀರಾ, ನಂತರ ವರ್ಷವಾದರೂ ಇತ್ತ ತಲೆ ಹಾಕುವುದಿಲ್ಲ. ನಮ್ಮ ಬೇಡಿಕೆಗಳು ಕೇವಲ ಭರವಸೆಯಾಗಿಯೇ ಉಳಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವರು ರೈತರನ್ನು ಸಮಾಧಾನಪಡಿಸಿ, ಬಜೆಟ್ನಲ್ಲಿ ರೇಷ್ಮೆ ಇಲಾಖೆಗೆ ವಿಶೇಷ ಅನುದಾನ ಒದಗಿಸುವುದಾಗಿ ಹೇಳಿ ಅಲ್ಲಿಂದ ತೆರಳಿದರು.