ಸಮನ್ವಯ ಸಮಿತಿ ಸಭೆಯಲ್ಲಿ ಮುಖಾಮುಖಿಯಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

 

ಬೆಂಗಳೂರು, ಜು.1- ರೈತರ ಸಾಲಮನ್ನಾ ಹಾಗೂ ಹೊಸ ಬಜೆಟ್ ಮಂಡನೆ ವಿಚಾರ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಮುಖಿಯಾದರು.
ಕುಮಾರಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅವರು ಪಾಲ್ಗೊಂಡಿದ್ದರು.

ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಸಿದ್ದರಾಮಯ್ಯ ಅವರು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಗೆ ದಾಖಲಾದ ನಂತರ ನಡೆದ ವಿದ್ಯಮಾನಗಳು ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದವು. ಸಿದ್ದರಾಮಯ್ಯ ಅವರು ಹೊಸ ಬಜೆಟ್ ಮಂಡನೆಯ ಅಗತ್ಯವಿಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದರು. ಈ ವಿಚಾರಗಳ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಇನ್ನು ಮುಂದೆ ಸರ್ಕಾರಕ್ಕೆ ಮುಜುಗರ ತರುವಂತಹ ಗೊಂದಲ ಉಂಟುಮಾಡುವಂತಹ ಹೇಳಿಕೆ ನೀಡುವುದನ್ನಾಗಲಿ, ಸನ್ನಿವೇಶಗಳನ್ನು ಸೃಷ್ಟಿಸುವುದನ್ನಾಗಲಿ ಮಾಡಬಾರದು. ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸಮನ್ವಯತೆಯಿಂದ ಸರ್ಕಾರವನ್ನು ಮುನ್ನಡೆಸಬೇಕು. ರಾಜ್ಯದ ಸಮಗ್ರ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಬೇಕು. ಒಂದು ವೇಳೆ ಯಾವುದೇ ಭಿನ್ನಾಭಿಪ್ರಾಯ ಹಾಗೂ ಸಮಸ್ಯೆ ತಲೆದೋರಿದರೂ ಉಭಯ ಪಕ್ಷಗಳ ವರಿಷ್ಠರ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಪ್ರಮುಖ ವಿಚಾರಗಳು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಇತ್ಯರ್ಥವಾಗಬೇಕು ಎಂದು ಸಮಾಲೋಚನೆ ನಡೆಸಲಾಗಿದೆ.

ಜುಲೈ 5ರಂದು ಕುಮಾರಸ್ವಾಮಿ ಮಂಡಿಸಲಿರುವ ಹೊಸ ಬಜೆಟ್ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. ಹಿಂದಿನ ಸರ್ಕಾರದ ಹಲವು ಜನಪ್ರಿಯ ಯೋಜನೆಗಳನ್ನು ಮುಂದುವರಿಸಬೇಕು ಹಾಗೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‍ನ ಕೆಲವು ಪ್ರಮುಖ ಅಂಶಗಳು ಹೊಸ ಬಜೆಟ್‍ನಲ್ಲೂ ಸೇರ್ಪಡೆಯಾಗಬೇಕು ಎಂಬುದೂ ಸೇರಿದಂತೆ ರೈತರ ಸಾಲಮನ್ನಾ ಮಾಡಲು ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯೂ ಕೂಡ ಸಾಕಷ್ಟು ಚರ್ಚೆ ನಡೆಸಲಾಗಿದೆ.
ಸಿದ್ದರಾಮಯ್ಯನವರು ಅನೌಪಚಾರಿಕವಾಗಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಬಹಿರಂಗವಾಗಿರುವ ಬಗ್ಗೆ ಜೆಡಿಎಸ್ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಅದಕ್ಕೆ ಸೂಕ್ತ ಸಮಜಾಯಿಷಿಯನ್ನೂ ಕೂಡ ಕಾಂಗ್ರೆಸ್ ನೀಡಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ನಿಗಮ-ಮಂಡಳಿಗಳ ಹಂಚಿಕೆ ಹಾಗೂ ನೇಮಕ ಕುರಿತಂತೆ ಚರ್ಚೆ ನಡೆಸಲಾಗಿದೆ. ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ಸರ್ಕಾರದಲ್ಲಿ ಅನುಷ್ಠಾನ ಮಾಡುವ ಬಗ್ಗೆ ಸಹಮತಕ್ಕೆ ಬರಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಹಿರಿಯ ಅಧಿಕಾರಿಗಳ ವರ್ಗಾವಣೆಯಿಂದ ಉಂಟಾದ ಭಿನ್ನಾಭಿಪ್ರಾಯದ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ. ಕೇವಲ ಒಂದು ವರ್ಗವನ್ನು ಓಲೈಸಿ ಮತ್ತೆ ಕೆಲವು ವರ್ಗಗಳ ಕೆಂಗಣ್ಣಿಗೆ ಗುರಿಯಾಗುವುದು ಬೇಡ. ಒಟ್ಟಾರೆ ಎಲ್ಲ ವರ್ಗಗಳ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂಬ ವಿಚಾರದಲ್ಲಿ ಸಹಮತಕ್ಕೆ ಬರಲಾಗಿದೆ.

ಸಮ್ಮಿಶ್ರ ಸರ್ಕಾರ ಜನರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ ಸಮನ್ವಯ ಸಮಿತಿ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆಯಾಗಿದ್ದು, ಅಧಿವೇಶನದ ನಂತರ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಸಾಧ್ಯತೆಗಳಿವೆ. ಸಮನ್ವಯ ಸಮಿತಿ ಸಭೆಗೂ ಮುನ್ನ ವೇಣುಗೋಪಾಲ್ ಅವರನ್ನು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್‍ನ ಹಲವು ನಾಯಕರು ಭೇಟಿ ಮಾಡಿ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಸಿದ್ದರಾಮಯ್ಯನವರು ನನ್ನ ಆಡಳಿತಾವಧಿಯಲ್ಲಿನ ಜನಪ್ರಿಯ ಯೋಜನೆಗಳ ಮುಂದುವರಿಕೆಯಾಗಬೇಕು. ನಿಗಮ-ಮಂಡಳಿಗಳಿಗೆ ನನ್ನ ಬೆಂಬಲಿಗರಿಗೆ ಅವಕಾಶ ನೀಡಬೇಕು, ಸಂಪುಟ ವಿಸ್ತರಣೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಎಲ್ಲರೂ ಸಮನ್ವಯತೆಯಿಂದ ಸರ್ಕಾರ ನಡೆಯಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ