ನಳಿನಿ ಚಿತ್ರದ ಚಿತ್ರೀಕರಣಕ್ಕೆ ವಿಶ್ವಭಾರತಿ ವಿಶ್ವವಿದ್ಯಾಲಯ ಅನುಮತಿ ನಿರಾಕರಣೆ

 

ಬೆಂಗಳೂರು, ಜು.1- ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಮತ್ತು ಮರಾಠಿ ಯುವತಿ ನಡುವಿನ ಸಂಬಂಧ ಕುರಿತಂತೆ ಪ್ರಿಯಾಂಕ ಚೋಪ್ರಾ ಪೆÇ್ರಡಕ್ಷನ್ ನಿರ್ಮಿಸಲು ಮುಂದಾಗಿರುವ ನಳಿನಿ ಚಲನಚಿತ್ರದ ಚಿತ್ರೀಕರಣಕ್ಕೆ ವಿಶ್ವಭಾರತಿ ವಿಶ್ವವಿದ್ಯಾಲಯ ಅನುಮತಿ ನಿರಾಕರಿಸಿದೆ.
ಟ್ಯಾಗೂರ್ ಕುರಿತಂತೆ ನಿರ್ಮಿಸಲಾಗುತ್ತಿರುವ ನಳಿನಿ ಚಿತ್ರವನ್ನು ವಿಶ್ವಭಾರತಿ ವಿವಿಯ ಕ್ಯಾಂಪಸ್‍ನಲ್ಲಿ ಚಿತ್ರೀಕರಿಸಲು ಚಿತ್ರತಂಡದವರು ತೀರ್ಮಾನಿಸಿದ್ದರು. ಈ ಕುರಿತಂತೆ ಮಾತುಕತೆ ನಡೆಸಲು ವಿವಿ ಉಪಕುಲಪತಿ ಸಬೂಜ್ ಕೋಲಿ ಸೇನ್ ಅವರನ್ನು ಸಂಪರ್ಕಿಸಿದಾಗ ಶೂಟಿಂಗ್‍ಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಟ್ಯಾಗೂರ್ ಮತ್ತು ಯುವತಿಯೊಬ್ಬರ ನಡುವಿನ ಸಂಬಂಧ ಕುರಿತಂತೆ ನಿರ್ಮಿಸಲಾಗುತ್ತಿರುವ ನಳಿನಿ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಿದರೆ ಸಾವಿರಾರು ಟ್ಯಾಗೂರ್ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಂತಾಗುತ್ತದೆ ಹಾಗೂ ಕ್ಯಾಂಪಸ್ ಆವರಣದ ಪರಿಸರ ಹಾಳು ಮಾಡಲು ಅವಕಾಶ ಮಾಡಿಕೊಡಬಾರದು ಎಂಬ ಉದ್ದೇಶದಿಂದ ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಸೇನ್ ತಿಳಿಸಿದ್ದಾರೆ.
ನಿರ್ದೇಶಕ ಉಜ್ವಲ್ ಚಟರ್ಜಿ ಅವರು ಟ್ಯಾಗೂರ್ 17ನೆ ವರ್ಷದವರಾಗಿದ್ದಾಗ ಅನ್ನಪೂರ್ಣ ಎಂಬ ಯುವತಿಯೊಂದಿಗೆ ಹೊಂದಿದ್ದ ಸಂಬಂಧ ಕುರಿತಂತೆ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.

ಟ್ಯಾಗೂರ್ ಅವರ ಫ್ಯಾಮಿಲಿ ಫ್ರೆಂಡ್ ಒಬ್ಬರ ಪುತ್ರಿಯಾಗಿದ್ದ ಅನ್ನಪೂರ್ಣ ಮತ್ತು ಟ್ಯಾಗೂರ್ ನಡುವಿನ ಸಂಬಂಧ ಕುರಿತಂತೆ ನಿರ್ಮಿಸಲುದ್ದೇಶಿಸಿದ್ದ ನಳಿನಿ ಚಲನಚಿತ್ರಕ್ಕೆ ವಿವಿ ಆವರಣದಲ್ಲಿ ಚಿತ್ರೀಕರಣ ನಡೆಸಲು ಹಿಂದಿನ ಉಪಕುಲಪತಿ ಸ್ವಪ್ನಕುಮಾರ್ ದತ್ತ ಅವರು ಅನುಮತಿ ನೀಡಿದ್ದರು ಎಂದು ನಿರ್ದೇಶಕ ಉಜ್ವಲ್ ಚಟರ್ಜಿ ಪ್ರತಿಪಾದಿಸಿದ್ದಾರೆ.
ನಳಿನಿ ಚಿತ್ರದ ಚಿತ್ರಕಥೆ ಟ್ಯಾಗೂರ್ ಅವರ ಆತ್ಮ ಚರಿತ್ರೆಯಿಂದ ಆಯ್ದುಕೊಂಡ ಕಥೆ ಹಾಗೂ ಸಂಶೋಧನಾ ವರದಿಗಳನ್ನಾಧರಿಸಿ ಚಿತ್ರ ನಿರ್ಮಿಸುತ್ತಿದ್ದೇವೆ. ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಿರುವ ವಿವಿ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ