ನಾಳೆಯಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಧಾನಮಂಡಲದ ಅಧಿವೇಶನ ಆರಂಭ

 

ಬೆಂಗಳೂರು, ಜು.1- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಉಂಟಾಗಿರುವ ಹಾನಿ, ಕುಡಿಯುವ ನೀರು, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಪ್ರತಿಧ್ವನಿಸಲಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ.
ನಾಳೆ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ವಿಧಾನಸಭೆಯಲ್ಲಿ ಮಾಡುವ ಭಾಷಣದೊಂದಿಗೆ ಜಂಟಿ ಅಧಿವೇಶನ ಆರಂಭವಾಗಲಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನ ಇದಾಗಿದ್ದು, ರಾಜ್ಯಪಾಲರ ಭಾಷಣ, ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಕೆ ಅಲ್ಲದೆ ಇದೇ ಅಧಿವೇಶನದಲ್ಲಿ ನೂತನ ಸರ್ಕಾರದ ಬಜೆಟ್ ಕೂಡ ಮಂಡನೆಯಾಗಲಿದೆ.
ಸರ್ಕಾರದಲ್ಲಿನ ಸಮನ್ವಯದ ಕೊರತೆ, ಮೈತ್ರಿ ಪಕ್ಷಗಳಲ್ಲಿನ ಭಿನ್ನಾಭಿಪ್ರಾಯ, ಇತ್ತೀಚೆಗೆ ಉಂಟಾದ ಕಾಂಗ್ರೆಸ್ ಪಕ್ಷದ ಭಿನ್ನಮತ ವಿಚಾರಗಳು ಕೂಡ ಸಂದರ್ಭೋಚಿತವಾಗಿ ಅಧಿವೇಶನದಲ್ಲಿ ಪ್ರಸ್ತಾಪವಾಗಲಿವೆ.

ಕಾನೂನು ಸುವ್ಯವಸ್ಥೆ, ಬೆಂಗಳೂರಿನ ಕಸದ ಸಮಸ್ಯೆ, ಸರ್ಕಾರಿ ನೌಕರರ ವರ್ಗಾವಣೆ ವಿಚಾರಗಳೂ ಕೂಡ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜ್ಯದ ಹಲವು ವಿಚಾರಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷವಾದ ಬಿಜೆಪಿ ನಡುವೆ ಸದನದಲ್ಲಿ ಮಾತಿನ ಚಕಮಕಿ ನಡೆಯುವ ಸಾಧ್ಯತೆಗಳಿವೆ.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮ ತಮ್ಮ ಚೊಚ್ಚಲ ಬಜೆಟನ್ನು ಜು.5ರಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಮುಖ್ಯಮಂತ್ರಿಗಳ ಮೇಲೆ ರೈತರ ಸಾಲ ಮನ್ನಾ ಮಾಡಲು ಬಿಜೆಪಿ ಹಾಗೂ ರೈತಪರ ಸಂಘಟನೆಗಳಿಂದ ಒತ್ತಡ ಹೇರಲಾಗುತ್ತಿದೆ. ಬಜೆಟ್‍ನಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಪ್ರಕಟಿಸುವ ಸಾಧ್ಯತೆ ಇದೆ.
ನಾಳೆ ರಾಜ್ಯಪಾಲರ ಭಾಷಣ ಮುಗಿದ ಬಳಿಕ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಪ್ರತ್ಯೇಕವಾಗಿ ಶಾಸಕರಾಗಿದ್ದ ಸಿದ್ದುನ್ಯಾಮೆಗೌಡ, ಬಿ.ಎನ್.ವಿಜಯ್‍ಕುಮಾರ್, ವಿಧಾನಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಗುತ್ತದೆ.

ಜು.3ರಿಂದ ಅಧಿವೇಶನದಲ್ಲಿ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, ಜು.12ರವರೆಗೂ ಉಭಯ ಸದನಗಳ ಅಧಿವೇಶನಗಳು ನಡೆಯಲಿವೆ. 15ನೇ ವಿಧಾನಸಭೆಯ ಮೊದಲ ಅಧಿವೇಶನ ಇದಾಗಿದೆ. ನೂತನ ಸದಸ್ಯರ ಪ್ರಮಾಣವಚನ ಹಾಗೂ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ವಿಶ್ವಾಸಮತಯಾಚನೆಯ ಅಧಿವೇಶನ ಒಂದು ದಿನ ನಡೆದಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿಶ್ವಾಸಯಾಚನೆಯ ಅಧಿವೇಶನ ಮತ್ತೊಂದು ದಿನ ನಡೆಯಿತು.
ಅದೇ ಅಧಿವೇಶನದಲ್ಲಿ ನೂತನ ಸಭಾಧ್ಯಕ್ಷರಾಗಿ ರಮೇಶ್‍ಕುಮಾರ್ ಅವಿರೋಧವಾಗಿ ಚುನಾಯಿತರಾದರು. ರಮೇಶ್‍ಕುಮಾರ್ ಅವರು ಎರಡನೇ ಬಾರಿ ಸಭಾಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಅಧಿವೇಶನದ ಕಾರ್ಯಕಲಾಪಗಳು ಹೇಗೆ ನಡೆಯಲಿವೆ ಎಂಬ ಕುತೂಹಲ ಹೆಚ್ಚಾಗಿದೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಹಾಗೂ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪಕ್ಷಭೇದ ಮರೆತು ಸಾರ್ವಜನಿಕರ ಸಮಸ್ಯೆಗಳು ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ. ಜತೆಗೆ ಪರಸ್ಪರ ಟೀಕೆಗಳು ಕೂಡ ಕೇಳಿ ಬರಲಿವೆ.
ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ. ರೈತರ ಸಾಲ ಮನ್ನಾ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ವಿರೋಧ ಪಕ್ಷ ಸಿದ್ದವಾಗಿದೆ.

ಸರ್ಕಾರದಲ್ಲಿ ತಿಂಗಳು ಕಳೆದರೂ ಸಮನ್ವಯದ ಕೊರತೆ ಎದ್ದು ಕಾಣುತ್ತಿರುವುದು ಅಧಿವೇಶನದಲ್ಲೂ ಪ್ರತಿಧ್ವನಿಸಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಂದಲ್ಲಾ ಒಂದು ವಿಚಾರದಲ್ಲಿ ಸಮನ್ವಯದ ಕೊರತೆ ಕಂಡು ಬಂದು ಉಭಯ ಪಕ್ಷಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಬಯಲಿಗೆ ಬಂದಿದೆ.
ಬಜೆಟ್ ಮಂಡನೆ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಒಮ್ಮತವಿಲ್ಲದಿರುವುದು ಈಗಾಗಲೇ ಬಹಿರಂಗವಾಗಿದೆ. ಆದರೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ತೀರ್ಮಾನದಂತೆ ಜು.5ರಂದು ಬಜೆಟ್ ಮಂಡಿಸಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿವೆ.
ಅಧಿವೇಶನದ ಅವಧಿ ಕಡಿಮೆ ಇರುವುದರಿಂದ ಅಲ್ಲದೆ ಸರ್ಕಾರವೂ ಹೊಸದಾಗಿರುವುದರಿಂದ ಹೆಚ್ಚಿನ ವಿಚಾರಗಳ ಚರ್ಚೆಗೆ ಅವಕಾಶ ಕಡಿಮೆ ಇದೆ. ಸಚಿವರು ಹೊಸಬರಾಗಿರುವುದರಿಂದ ಜ್ವಲಂತ ಸಮಸ್ಯೆಗಳ ಚರ್ಚೆ ಹಾಗೂ ಉತ್ತರ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ರಾಜ್ಯ ಸರ್ಕಾರದ ಬಜೆಟ್‍ಗೆ ಇದೇ ಅಧಿವೇಶನದಲ್ಲಿ ಉಭಯ ಸದನಗಳ ಒಪ್ಪಿಗೆ ಪಡೆಯಬೇಕಾದ ಅನಿವಾರ್ಯತೆ ಇದೆ. ಬಜೆಟ್‍ಗೆ ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸರ್ಕಾರ ತೀವ್ರ ಮುಜುಗರವನ್ನು ಎದುರಿಸಬೇಕಾಗುತ್ತದೆ.
ಇದರಿಂದಾಗಿ ಸರ್ಕಾರದ ಉಭಯ ಪಕ್ಷಗಳು ಅಧಿವೇಶನ ಸಂದರ್ಭದಲ್ಲಿ ಪ್ರತಿ ದಿನವೂ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ