ಟ್ಯುನಿಷಿಯಾ ದಾಖಲೆ, 40 ವರ್ಷಗಳ ಬಳಿಕ ಫೀಫಾ ವಿಶ್ವಕಪ್ ನಲ್ಲಿ ಮೊದಲ ಗೆಲುವು!

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಗುರುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಟ್ಯುನಿಷಿಯಾ ತಂಡ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಬರೊಬ್ಬರಿ 40 ವರ್ಷಗಳ ಬಳಿಕ ಮೊದಲ ಗೆಲುವು ಸಾಧಿಸಿದೆ.
ಗುರುವಾರ ನಡೆದ ಪನಾಮಾ ವಿರುದ್ಧದ ಪಂದ್ಯದಲ್ಲಿ ಟ್ಯುನಿಷಿಯಾ 2-1 ಅಂತರದ ಗೋಲುಗಳ ಜಯ ಸಾಧಿಸುವ ಮೂಲಕ ವಿಶ್ವಕಪ್ ನಲ್ಲಿನ ತನ್ನ ಸುಧೀರ್ಘ ಗೆಲುವಿನ ಬರಕ್ಕೆ ಅಂತ್ಯ ಹಾಡಿಗೆ. 1978ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಟ್ಯುನಿಷಿಯಾ ಅರ್ಜೆಂಟೀನಾ ವಿರುದ್ಥ ತನ್ನ ಮೊದಲ ಗೆಲುವು ಸಾಧಿಸಿತ್ತು. ಆ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಟ್ಯುನಿಷಿಯಾಗೆ ಗೆಲುವು ಎಂಬುದು ಕಬ್ಬಿಣದ ಕಡಲೆಯಾಗಿತ್ತು.
ಇದೀಗ ತನ್ನ ಗೆಲುವಿನ ಸುಧೀರ್ಘ ಬರ ನೀಗಿಸಿಕೊಂಡಿರುವ ಟ್ಯುನಿಷಿಯಾ ಪನಾಮವನ್ನು 2-1 ಅಂತರದಲ್ಲಿ ಮಣಿಸಿ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದೆ.
ವಿಶ್ವಕಪ್ ನಲ್ಲಿ 2500ನೇ ಗೋಲು ದಾಖಲಿಸಿದ ಫಕ್ರೆದಿನ್ ಬೆನ್ ಯುಸೇಫ್
ಇನ್ನು ಇದೇ ಟ್ಯುನಿಷಿಯಾ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ವಿಶ್ವಕಪ್ ಟೂರ್ನಿಯಲ್ಲಿ 2500ನೇ ಗೋಲು ದಾಖಲಿಸಿದ ಕೀರ್ತಿಗೂ ಟ್ಯುನಿಷಿಯಾದ ಸ್ಟ್ರೈಕರ್ ಫಕ್ರೆದಿನ್ ಬೆನ್ ಯುಸೇಫ್ ಪಾತ್ರರಾದರು. ಪಂದ್ಯದ 51ನೇ ನಿಮಿಷದಲ್ಲಿ ಫಕ್ರೆದಿನ್ ಬೆನ್ ಯುಸೇಫ್ ಟ್ಯುನಿಷಿಯಾ ಪರ ಮೊದಲ ಗೋಲು ದಾಖಲಿಸಿದ್ದಲ್ಲದೆ ಪನಾಮಾ ವಿರುದ್ಧ ತಂಡ ಸಮಬಲ ಸಾಧಿಸುವಂತೆ ಮಾಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ