ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅರ್ಹರನ್ನು ನೇಮಕ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗೆ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು, ಜೂ.29- ಇದೇ ಜೂನ್ 30 ರಂದು ತೆರವಾಗುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅರ್ಹರನ್ನು ನೇಮಕ ಮಾಡುವ ಪರಮಾಧಿಕಾರವನ್ನು ರಾಜ್ಯ ಸಚಿವ ಸಂಪುಟ ಮುಖ್ಯಮಂತ್ರಿಯವರಿಗೆ ನೀಡಿದೆ.

ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಪ್ರಸ್ತುತ ಮುಂದುವರೆಯುತ್ತಿರುವ ಕೆ.ರತ್ನಪ್ರಭಾ ಅವರನ್ನು ಮತ್ತೆ ಮೂರು ತಿಂಗಳ ಅವಧಿಗೆ ಮುಂದುವರೆಸುವಂತೆ ರಾಜ್ಯ ಸರ್ಕಾರ ಬರೆದ ಪತ್ರಕ್ಕೆ ಕೇಂದ್ರ ಸರ್ಕಾರವು ಈವರೆಗೆ ಯಾವುದೇ ಉತ್ತರ ನೀಡದಿರುವ ಹಿನ್ನೆಲೆಯಲ್ಲಿ ರತ್ನಪ್ರಭಾ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುವ ಮುನ್ನ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಬಾರದಿದ್ದಲ್ಲಿ ಕಾರ್ಯಾಂಗದ ಈ ಅತ್ಯುನ್ನತ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡಿ, ನೇಮಕ ಮಾಡುವ ಮಹತ್ತರ ಜವಾಬ್ದಾರಿಯನ್ನು ರಾಜ್ಯ ಸಚಿವ ಸಂಪುಟ ಮುಖ್ಯಮಂತ್ರಿಗೆ ನೀಡಿದೆ.

ಅಂತೆಯೇ, ರಾಜ್ಯದ ನಾಲ್ಕನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಹಂತ ಹಂತವಾಗಿ ಅನುಷ್ಠಾನ ಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೆ, ಈ ಆಯೋಗದ ಶಿಫಾರಸ್ಸಿನಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಈ ಹಿಂದೆ ಮೀಸಲಿರಿಸಲಾಗಿದ್ದ ಅನುದಾನದ ಮೊತ್ತವನ್ನು ಶೇಕಡಾ 40 ರಿಂದ ಶೇಕಡಾ 48 ಕ್ಕೆ ಹೆಚ್ಚಳ ಮಾಡಲು ಸಂಪುಟ ಸಮ್ಮತಿಸಿದೆ.

ಹದಿನೈದನೇ ವಿಧಾನ ಸಭೆಯ ಮೊದಲ ಜಂಟಿ ಅಧಿವೇಶನದಲ್ಲಿ ಜುಲೈ 2 ರಂದು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಲಿರುವ ಕರಡು ಭಾಷಣಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಕೃಷ್ಣ ಬೈರೇಗೌಡ ಅವರು ಹೇಳಿದರು.
Cabinet meeting,CM HD kumaraswamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ