
ಬೆಂಗಳೂರು, ಜೂ.28- ಪ್ರಸಕ್ತ ಸಾಲಿನ ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಕಾಲಾವಧಿಯೋಳಗೆ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮೇಯರ್ ಸಂಪತ್‍ರಾಜ್ ಅವರಲ್ಲಿ ಮನವಿ ಮಾಡಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಾಲಿಕೆ ಮಂಡಿಸಿದ ಬಜೆಟ್‍ಗೆ ಅನುಮೋದನೆ ನೀಡಿದೆ. ಹಾಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಅನುಮೋದನೆಗೆ ವಿಳಂಬ ಆಗಿದೆ. ಈಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಜೆಟ್‍ಗೆ ಅನುಮೋದನೆ ನೀಡಿದ್ದಾರೆ. ಬಜೆಟ್ ಅನುಷ್ಠಾನಕ್ಕೆ ಕಾಲಾವಕಾಶ ಕಡಿಮೆ ಇದೆ. ನಿಗದಿತ ಅವಧಿಯೊಳಗೆ ಎಲ್ಲಾ ಕಾಮಗಾರಿ ಮುಗಿಸಬೇಕಿದೆ. ಹಾಗಾಗಿ ಅಧಿಕಾರಿಗಳಿಗೆ ಸಲಹೆ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ ಎಂದರು.
ಮಳೆಗಾಲ ಪ್ರಾರಂಭವಾಗಿದೆ. ಶೀಘ್ರ ಯೋಜನೆಗಳನ್ನು ಪ್ರಾರಂಭಿಸಿ ಎಂದು ಶಿವರಾಜ್ ಮನವಿ ಮಾಡಿದರು.