ಕ್ಯಾನ್ಸರ್ ತಡೆಗಟ್ಟಲು ಹೆಚ್ಚಿನ ಕ್ರಮ ವಹಿಸುವ ಅಗತ್ಯವಿದೆ: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

 

ಬೆಂಗಳೂರು, ಜೂ.28- ಮಾರಕ ರೋಗ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗಕ್ಕೆ ಚಿಕಿತ್ಸೆ ನೀಡುವ ಜತೆಗೆ ಅದನ್ನು ತಡೆಗಟ್ಟಲು ಹೆಚ್ಚಿನ ಕ್ರಮ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರೋಗ ತಡೆ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಇಂದಿಲ್ಲಿ ತಿಳಿಸಿದರು.
ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಪತ್ತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ರೋಗ ಹರಡುವ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಹೆಚ್ಚಿದೆ. ಕ್ಯಾನ್ಸರ್ ರೋಗ ತಪಾಸಣೆಯನ್ನು ಕಡ್ಡಾಯಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಕ್ಯಾನ್ಸರ್ ರೋಗ ತಪಾಸಣೆ ನಡೆಸುವುದರಿಂದ ರೋಗ ಆರಂಭದಲ್ಲೇ ಪತ್ತೆಯಾಗುತ್ತದೆ. ಆಗ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.
ರೋಗಗಳು ಹೆಚ್ಚುತ್ತಿರುವುದಕ್ಕೆ ಇಂದು ನಮ್ಮಲ್ಲಿರುವ ಆಹಾರ ಪದ್ಧತಿ ಮತ್ತು ಜೀವನ ಕ್ರಮವೇ ಪ್ರಮುಖ ಕಾರಣವಾಗಿದೆ. ಹಿಂದಿನಂತೆ ಈಗ ನಮ್ಮ ಜೀವನ ಕ್ರಮದಲ್ಲಿ ದೈಹಿಕ ಶ್ರಮವೇ ಇಲ್ಲ. ಆಹಾರ ಪದ್ಧತಿಯಲ್ಲಿ ಜಂಕ್‍ಫುಡ್ ಸ್ಥಾನ ಪಡೆದುಕೊಂಡಿದೆ. ಇದರಿಂದಾಗಿ ಎಲ್ಲಾ ರೋಗಗಳು ಆವರಿಸುತ್ತಿವೆ ಎಂದು ಹೇಳಿದರು.

ನಾವೂ ಸಹ ಹಿಂದಿನವರಂತೆ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಹೆಚ್ಚು ಉತ್ತಮ ಎಂದ ಅವರು, ಮಾಜಿ ಎಚ್.ಡಿ.ದೇವೇಗೌಡರು ಇಂದಿಗೂ ಯೋಗ, ಪ್ರಾಣಾಯಾಮ ಮಾಡುತ್ತಾರೆ. ಅಂತಹ ಪದ್ಧತಿ ಎಲ್ಲರೂ ಅಳವಡಿಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಂತೂ ಅಕ್ಷರಶಃ ದೈಹಿಕ ಶ್ರಮ ಮಾಯವಾಗಿದೆ. ನಮ್ಮ ನಗರಗಳಲ್ಲಿ ಆಕಾಶದಲ್ಲಿ ಸೂರ್ಯ, ಚಂದ್ರರನ್ನು ನೋಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಮಾಲೀನ್ಯದಿಂದ ಎದುರಾಗಿದೆ. ಒಳ್ಳೆಯ ಗಾಳಿ ಅಥವಾ ವಾತಾವರಣವು ಇಲ್ಲದಂತಾಗಿದೆ ಎಂದರು.
ವಾರ್ಷಿಕ ಐದು ಲಕ್ಷ ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. 2020ರ ವೇಳೆಗೆ ಈ ಪ್ರಮಾಣ ದುಪ್ಪಟ್ಟು ಆಗುವ ಸಂಭವವಿದೆ ಎಂದು ಭಾರತೀಯ ಕ್ಯಾನ್ಸರ್ ವೈದ್ಯಕೀಯ ಸಂಶೋಧನಾ ಸಂಸ್ಥೆ ಸಮೀಕ್ಷೆಯಲ್ಲಿ ಹೇಳಿದೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ತನ ಕ್ಯಾನ್ಸರ್ ಪ್ರಮಾಣವೂ ಏರಿಕೆಯಾಗಲಿದೆ. ಈಗ ವಾರ್ಷಿಕ ಹತ್ತು ಲಕ್ಷ ರೋಗಿಗಳು ಇರುವೆಡೆ 17 ಲಕ್ಷ ಮುಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ವ್ಯಾಪಕವಾಗಿ ರೋಗ ಹರಡುತ್ತಿದೆ ಎಂದು ವಿವರಿಸಿದರು.

ಆಸ್ಪತ್ರೆಗೆ ಬಂದು ತಪಾಸಣೆಗೊಳಪಡುವವರು ಶೇ.12.5ರಷ್ಟು ಮಂದಿ ಮಾತ್ರ. ಆದರೆ, ಬಹಳಷ್ಟು ಜನ ಚಿಕಿತ್ಸೆಯನ್ನೇ ಪಡೆಯುವುದಿಲ್ಲ. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯ. ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ ರೇಡಿಯೋ ಥೆರಪಿ ಹಾಗೂ ಕಿಮೋ ಥೆರಪಿ ವಿಧಾನಗಳಲ್ಲಿ ಕಿಮೋ ಥೆರಪಿ ನೋವಿನಿಂದ ಕೂಡಿದ ದುಬಾರಿ ಚಿಕಿತ್ಸೆಯಾಗಿದೆ. ಗ್ರಾಮೀಣ ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕಿದೆ. ರೋಗಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಗುಣಮಟ್ಟದ ಚಿಕಿತ್ಸೆ ನೀಡಬೇಕಿದೆ ಎಂದು ಉಪರಾಷ್ಟ್ರಪತಿಗಳು ಪ್ರತಿಪಾದಿಸಿದರು.
ಚಿಕಿತ್ಸೆಗೆ ಒಳಗಾಗುವ ರೋಗಿಗಳು ಒಂದೆಡೆ ನೋವು ಅನುಭವಿಸಿದರೆ ಮತ್ತೊಂದೆಡೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ರೋಗಿಗಳಿಗೆ ಆಪ್ತ ಸಮಾಲೋಚನೆ ಮೂಲಕ ನೆರವು ನೀಡಬೇಕಿದೆ ಎಂದರು.
ಕನ್ನಡಿಗರು ಹೃದಯದಲ್ಲಿದ್ದಾರೆ:
ಕನ್ನಡದಲ್ಲೇ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು ಅವರು, ತಮಗೆ ನಾಲ್ಕು ದಶಕಗಳಿಂದ ಕರ್ನಾಟಕದ ಸಂಬಂಧವಿದೆ. ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕನ್ನಡಿಗರು ನನ್ನ ಹೃದಯದಲ್ಲಿದ್ದಾರೆ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಮನದುಂಬಿ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ