ವಾಷಿಂಗ್ಟನ್: ಇರಾನ್ ನಿಂದ ನವೆಂಬರ್ ವೇಳೆಗೆ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಅಮೆರಿಕ ಕರೆ ನೀಡಿದೆ.
ಇರಾನ್ ನ ತೈಲ ಕಂಪೆನಿಗಳ ಮೇಲೆ ನವೆಂಬರ್ 4ರ ಹೊತ್ತಿಗೆ ಭಾರತ, ಚೀನಾ ಸೇರಿದಂತೆ ಎಲ್ಲಾ ದೇಶಗಳು ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಹೇಳಿರುವುದಾಗಿ ಅಮೆರಿಕ ಸರ್ಕಾರದ ಇಲಾಖೆ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಹಿಂದೆ ಬೇರೆ ದೇಶಗಳಿಗೆ ಅಮೆರಿಕ ಇರಾನ್ ನಿಂದ ತೈಲ ಆಮದಿಗೆ ದಿಗ್ಭಂದನ ಹೇರಿತ್ತು.
ಈಗಿನಿಂದಲೇ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಇರಾನ್ ನಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ನವೆಂಬರ್ 4ರ ವೇಳೆಗೆ ಶೂನ್ಯಮಟ್ಟಕ್ಕೆ ತರಬೇಕೆಂದು ನಾವು ಮನವಿ ಮಾಡದ್ದೇವೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಪ್ರಶ್ನೆ ಎತ್ತದೆ ಮತ್ತು ಆಕ್ಷೇಪ ವ್ಯಕ್ತಪಡಿಸದೆ ಇದನ್ನು ಪಾಲಿಸಬೇಕು. ಇದನ್ನೇ ನಾವು ದ್ವಿಪಕ್ಷೀಯ ಮಾತುಕತೆ ಸಭೆಯಲ್ಲಿ ಹೇಳಿರುವುದು ಎಂದು ಅಧಿಕಾರಿ ಹೇಳಿದ್ದಾರೆ.
ಇರಾನ್ ಗೆ ಹರಿದು ಬರುವ ಹಣದ ಹರಿವನ್ನು ಪ್ರತ್ಯೇಕಿಸಿ ಮತ್ತು ತನ್ನ ಸುತ್ತಮುತ್ತಲ ದೇಶಗಳಲ್ಲಿ ಇರಾನ್ ನಡೆಸುತ್ತಿರುವ ದುರ್ವರ್ತನೆ ಆಡಳಿತವನ್ನು ಸಂಪೂರ್ಣವಾಗಿ ಜಗತ್ತಿಗೆ ತೋರಿಸಿ ವಿಫಲಗೊಳಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಮಾಡುತ್ತಿರುವ ಪ್ರಯತ್ನ ಇದಾಗಿದೆ. ಇದಕ್ಕಾಗಿ ನಾವು ಐರೋಪ್ಯ ಒಕ್ಕೂಟದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ರಾಷ್ಟ್ರಗಳೊಂದಿಗೆ ಮತ್ತು ಹೊಸ ಭಾಗಿದಾರರನ್ನು ಸಂಪರ್ಕಿಸಲಿದ್ದೇವೆ ಎಂದರು.
ಹೆಚ್ಚು ಇಂಧನದ ಅಗತ್ಯದಿಂದ ಇರಾನ್ ನಿಂದ ಭಾರತ ಮತ್ತು ಚೀನಾ ಅಧಿಕ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದ್ದವು. ಭಾರತದ ಮತ್ತು ಚೀನಾ ಕಂಪೆನಿಗಳಿಗೆ ಈ ಹಿಂದೆ 2015ರಲ್ಲಿ ಕೂಡ ನಿರ್ಬಂಧ ಹೇರಲಾಗಿತ್ತು.
ಮುಂದಿನ ವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕಾಕ್ಕೆ ಹೋಗಲಿದ್ದು ಅಲ್ಲಿ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರಲಿದೆ.