ಕಾಂಗ್ರೆಸ್‌ ಪಾಲಿಗೆ ಟ್ರಬಲ್‌ಶೂಟರ್‌ ಆಗಿದ್ದ ಸಿದ್ದರಾಮಯ್ಯ ಈಗ ಟ್ರಬಲ್‌ ಮೇಕರ್‌ ಆಗಿಬಿಟ್ಟರೇ?

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಂದಿನಿಂದ ಅಸಮಾಧಾನ, ಅತೃಪ್ತಿಯಿಂದ ತೊಳಲಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡೆಯು ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್‌ ಶಾಸಕರು ಮಾತ್ರವಲ್ಲದೆ ಕಾಂಗ್ರೆಸ್‌ ಮುಖಂಡರ ಅಸಮಾಧಾನಕ್ಕೂ ಕಾರಣವಾಗಿದೆ.
ಕಾಂಗ್ರೆಸ್‌ ಪಾಲಿಗೆ ಟ್ರಬಲ್‌ಶೂಟರ್‌ ಆಗಿದ್ದ ಸಿದ್ದರಾಮಯ್ಯ ಈಗ ಟ್ರಬಲ್‌ ಮೇಕರ್‌ ಆಗಿಬಿಟ್ಟರೇ ಎಂಬ ಪ್ರಶ್ನೆಯನ್ನು ಈ ಬೆಳವಣಿಗೆ ಹುಟ್ಟು ಹಾಕಿದೆ.
ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸುಗಮ ಕಾರ್ಯನಿರ್ವಹಣೆಯ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಿದೆ. ಆದರೆ ಅವರು ಈ ಸರಕಾರದ ಉಳಿವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವುದರಲ್ಲೇ ತೊಡಗಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಮಾತ್ರ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.
ಸಿದ್ದರಾಮಯ್ಯ ಅವರು ಬಜೆಟ್‌ ವಿಚಾರವನ್ನು ಒಪ್ಪಂದದಂತೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸುವ ಬದಲು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಮಾತ್ರವೇ ಮಾಧ್ಯಮಗಳಲ್ಲಿ ಈ ವಿಚಾರಗಳ ಬಗ್ಗೆ ಹೇಳಿಕೆ ನೀಡಲು ಅಧಿಕಾರವಿದೆ ಎಂದು ಜೆಡಿಎಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಶಿಬಿರದಿಂದ ಬಂದಿರುವ ವೀಡಿಯೊ ಕ್ಲಿಪ್‌ಗಳು ಕೂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಶಾಸಕರಲ್ಲಿ ಗೊಂದಲ ಹುಟ್ಟು ಹಾಕಿದೆ. ಅವರು ನಿಜವಾಗಿಯೂ ವಿಶ್ರಾಂತಿಗಾಗಿ ಅಲ್ಲಿಗೆ ಹೋಗಿದ್ದರೆ ಕೆಲವು ಶಾಸಕರು, ಕಾಂಗ್ರೆಸ್‌ ಮುಖಂಡರು ಅವರನ್ನು ಭೇಟಿಯಾಗಲು ಅಲ್ಲಿಗೆ ಏಕೆ ಹೋಗುತ್ತಿದ್ದಾರೆ ಎಂದು ಹಲವು ಶಾಸಕರು ಪ್ರಶ್ನಿಸುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ