ಬೆಂಗಳೂರು: ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭವಾಗಿರುವಂತೆ ಮೇಲ್ಮನೆ ಪ್ರತಿಪಕ್ಷದ ನಾಯಕನ ಸ್ಥಾನ ಅಲಂಕರಿಸಲು ಬಿಜೆಪಿಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.
ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ವಿಧಾನ ಸಭೆಗೆ ಆಯ್ಕೆಯಾದ ನಂತರ ಬಿಜೆಪಿಯಲ್ಲಿ ಹಲವರ ಹೆಸರು ಕೇಳಿಬಂದಿದೆಯಾದರೂ ಈವರೆಗೂ ಅಂತಿಮಗೊಂಡಿಲ್ಲ.
ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಹಿರಿಯ ಸದಸ್ಯರಾದ ರಘುನಾಥ್ ಮಲ್ಕಾಪುರೆ, ಮತ್ತು ಅರುಣ್ ಶಹಾಪೂರ್ ಹಾಗೂ ಬಿ.ಎಸ್.ಯಡಿಯೂರಪ್ಪನವರ ಆಪ್ತ ಆಯನೂರು ಮಂಜುನಾಥ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ಪಕ್ಷದ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿಯೇ ನಿಭಾಯಿಸಿರುವ ಆಯನೂರು ಮಂಜುನಾಥ್ಗೆ ಈ ಸ್ಥಾನ ನೀಡಿದರೆ ಜವಾಬ್ದಾರಿಯುತವಾಗಿ ನಿಭಾಯಿಸಬಹುದು ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿವೆ.
ಆದರೆ, ಈಗಾಗಲೇ ವಿಧಾನಸಭೆಯಲ್ಲಿ ಯಡಿಯೂರಪ್ಪ ಪ್ರತಿಪಕ್ಷದ ನಾಯಕರಾಗಿರುವುದರಿಂದ ಮೇಲ್ಮನೆಯಲ್ಲೂ ಅದೇ ಸಮುದಾಯಕ್ಕೆ ಸೇರಿದವರನ್ನೇ ವಿರೋಧ ಪಕ್ಷದಲ್ಲಿ ಕೂರಿಸಿದರೆ ಕೆಟ್ಟ ಸಂದೇಶ ರವಾನೆಯಾಗಬಹುದು ಎಂಬ ಭೀತಿಯೂ ಎದುರಾಗಿದೆ.
ಇಬ್ಬರೂ ಒಂದೇ ಜಿಲ್ಲೆಗೆ ಸೇರಿರುವುದರಿಂದ ಆಯನೂರು ಮಂಜುನಾಥ್ ಗೆ ಹಿನ್ನಡೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಒಂದು ವೇಳೆ ಕೋಟಾ ಶ್ರೀನಿವಾಸ್ ಪೂಜಾರಿಗೆ ಈ ಸ್ಥಾನ ಒಲಿದರೆ ವಿಧಾನ ಪರಿಷತ್ನ ಮುಖ್ಯ ಸಚೇತಕರಾಗಿ ಅರುಣ್ ಶಹಪುರ್ ಅವರನ್ನು ಆಯ್ಕೆ ಮಾಡುವ ಸಂಭವವಿದೆ.
ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕೆಂಬ ಸದುದ್ದೇಶ ಇಟ್ಟುಕೊಂಡರೆ ಶಹಪುರ್ ಗೆ ಸಿಗಬೇಕು. ಈ ಬಗ್ಗೆ ಸದ್ಯದಲ್ಲೇ ನಡೆಯಲಿರುವ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಆದರೆ, ಆಡಳಿತ ಪಕ್ಷದ ವೈಫಲ್ಯಗಳನ್ನು ಸಮರ್ಥವಾಗಿ, ಎಳೆ ಎಳೆಯಾಗಿ ಸದನದಲ್ಲಿ ಬಿಡಿಸಿಡುವ ಚಾಕಚಕ್ಯತೆ ಶಾಣಪ್ಪನವರಿಗೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಅವರಿಗೆ ಸಂವಹನದ ಕೊರತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.