ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 7188 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಮಹಾದೇವಮ್ಮ ಜಯ ಸಾಧಿಸಿದ್ದಾರೆ.
ಹೋಮ್ ಸೈನ್ಸ್ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಐಶ್ವರ್ಯಾ 1939 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ ಅವರ ಆಪ್ತೆ ವಿದ್ಯಾ ಶಶಿಕುಮಾರ್ 5249 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ದಿನೇಶ್ ಗುಂಡೂರಾವ್ ಅವರ ಪ್ರತಿಷ್ಟೆಯ ಕಣವಾಗಿದ್ದ ಬಿನ್ನಿಪೇಟೆ ವಾರ್ಡ್ನಲ್ಲಿ ಸೋಲಿನ ರುಚಿ ಕಂಡಂತಾಗಿದೆ. ಬಿಜೆಪಿಯ ಜಿ. ಚಾಮುಂಡೇಶ್ವರಿ ಅವರಿಗೆ 2455 ಮತಗಳು ಲಭಿಸಿದ್ದು, 159 ಮಂದಿ ನೋಟಾಕ್ಕೆ ಬೆರಳನ್ನೊತ್ತಿದ್ದಾರೆ.
ಗಾಂಧಿನಗರ ವಿಧಾನಸಭಾ ವ್ಯಾಪ್ತಿಗೆ ಬರುವ ಈ ವಾರ್ಡ್‍ನ ಕಾರ್ಪೋರೇಟರ್ ಮಹಾದೇವಮ್ಮ ಹೃದಯಾಘಾತದಿಂದ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮಹಾದೇವಮ್ಮ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತ. 34,582 ಮತದಾರರಿರುವ ಈ ವಾರ್ಡ್ನಲ್ಲಿ ಶೇ. 43.55ರಷ್ಟು ಮತದಾನವಾಗಿತ್ತು.