ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದೇನು…? ಸರ್ಕಾರ ರಚನೆಯ 2 ಸಾಧ್ಯಾಸಾಧ್ಯತೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನ ಬಿಜೆಪಿ ಕಡಿದುಕೊಂಡಿದೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಗವರ್ನರ್ ಆಡಳಿತ ಅಸ್ತಿತ್ವಕ್ಕೆ ಬಂದಿದೆ.  ಆದಾಗ್ಯೂ, ಗವರ್ನರ್ ಅವಕಾಶ ನೀಡಿದಲ್ಲಿ ಮತ್ತೆ ಸರ್ಕಾರ ರಚಿಸಬಹುದಾದ ಎರಡು ಸಾಧ್ಯಾಸಾಧ್ಯತೆಗಳು ಇಲ್ಲಿವೆ.
1.ಪಿಡಿಪಿ+ಎನ್ಸಿ+ಪಕ್ಷೇತರರು
87 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ 44 ಶಾಸಕರ ಬಲ ಬೇಕು. 2014ರ ವಿಧಾನಸಭಾ ಚುನಾವಣೆಯಲ್ಲಿ ಪಿಡಿಪಿ 28 ಸ್ಥಾನಗಳನ್ನ ಗೆದ್ದಿದ್ದು, ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್ 15 ಸ್ಥಾನಗಳನ್ನ ಹೊಂದಿದೆ. ಇವೆರಡೂ ಪಕ್ಷಗಳು ಸೇರಿದರೆ 43 ಸ್ಥಾನಗಳಾಗುತ್ತದೆ. ಒಂದು ಸ್ಥಾನದ ಕೊರತೆ ಕಾಡುತ್ತದೆ. ಪಕ್ಷೇತರರ ಬೆಂಬಲ ಪಡೆದು ಈ ಮೈತ್ರಿಕೂಟ ಸರ್ಕಾರ ರಚನೆ ಮಾಡಬಹುದು.
ಲಂಗೇಟ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಈ ಮೈತ್ರಿಕೂಟವೇ ಸರ್ಕಾರ ರಚಿಸುವ ಎಲ್ಲ ಸಾಧ್ಯತೆಗಳಿವೆ. 2014 ಚುನಾವಣೇಯ ಫಲಿತಾಂಶ ಬಂದ ಕೂಡಲೇ ಏಕೈಕ ದೊಡ್ಡ ಪಕ್ಷವಾಗಿದ್ದ ಪಿಡಿಪಿ ಸರ್ಕಾರ ರಚಿಸಲು ಬಿಜೆಪಿ ಜೊತೆ ಕೈಜೋಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಕೊಂಚ ಸಮಯ ತೆಗೆದುಕೊಂಡಿತ್ತು. ಈ ಸಂದರ್ಭ ಎನ್​ಸಿ, ಪಿಡಿಪಿಗೆ ಬೆಂಬಲ ಘೋಷಿಸಿ ಗವರ್ನರ್​ಗೆ ಪತ್ರ ನೀಡಿತ್ತು. ಇದೀಗ, ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿರುವ ಪಿಡಿಪಿಗೆ ಎನ್​ಸಿ ಮತ್ತೆ ಬೆಂಬಲ ನಿಡುವ ಸಾಧ್ಯತೆ ಇದೆ.
2. ಪಿಡಿಪಿ+ಕಾಂಗ್ರೆಸ್+ಪೀಪಲ್ಸ್ ಕಾನ್ಫರೆನ್ಸ್+ಪಕ್ಷೇತರ
ಜಮ್ಮು ಮತ್ತು ಕಾಶ್ಮೀರದ ಸರ್ಕಾರ ರಚನೆಯ ಮತ್ತೊಂದು ಸಾಧ್ಯತೆ ಎಂದರೆ, ಪಿಡಿಪಿ+ಕಾಂಗ್ರೆಸ್+ಪೀಪಲ್ಸ್ ಕಾನ್ಫರೆನ್ಸ್+ಪಕ್ಷೇತರರ ಮೈತ್ರಿ. ಪಿಡಿಪಿ 28 ಸ್ಥಾನಗಳ ಜೊತೆ ಕಾಂಗ್ರೆಸ್​ನ 12 ಸ್ಥಾನ ಸೇರಿದರೆ 40 ಸ್ಥಾನವಾಗಲಿದೆ. ಬೇಕಾಗುವ ಇನ್ನೂ 4 ಸ್ಥಾನಗಳನ್ನ ಸಜಾದ್ ಲೋನ್ಸ್ ಪೀಪಲ್ಸ್ ಕಾನ್ಫರೆನ್ಸ್​ನಿಂದ 2 ಸ್ಥಾನ, ಪಕ್ಷೇತರರಿಂದ 2 ಸ್ಥಾನ ಪಡೆದು ಸರ್ಕಾರ ರಚಿಸಬಹುದು.ಸಿಪಿಎಂನ ಮೊಹಮ್ಮದ್ ಯೂಸುಫ್ ಅವರಿಂದಲೂ ಬೆಂಬಲ ಪಡೆಯುವ ಸಾಧ್ಯತೆ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ