ನವದೆಹಲಿ:ಜೂ-18: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಬೆಳಿಗ್ಗೆ ಸಿಎಂ ಕುಮಾರಸ್ವಾಮಿ, ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿ, ರಾಹುಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಭೇಟಿ ವೇಳೆ ಜೆಡಿಎಸ್ ಮುಖಂಡ ಡ್ಯಾನಿಸ್ ಅಲಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.
ರಾಹುಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ಸೌಹಾರ್ದಯುತ ಭೇಟಿ ಮಾಡಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾಗಿದೆ. ಸುಭದ್ರವಾಗಿ ಸಮ್ಮಿಶ್ರ ಸರ್ಕಾರ ನಡೆಸಲು ರಾಹುಲ್ ಗಾಂಧಿ ಅವರ ಸಹಕಾರ ಕೋರಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯದ ಬಗ್ಗೆ ಚರ್ಚೆ ಮಾಡಿದ್ದೇನೆ. ಬಜೆಟ್ ಬಗ್ಗೆ ಕೂಡಾ ರಾಹುಲ್ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಭೇಟಿ ಬಳಿಕ ಕುಮಾರಸ್ವಾಮಿಯವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಲಿರುವ ಕುಮಾರಸ್ವಾಮಿಯವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ಸಾರಿಗೆ ವಿಚಾರಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
CM Kumaraswamy,meets,Rahul Gandhi