ನವದೆಹಲಿ: ಜೂ-17: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಸರಣಿ ದಾಳಿ ಮತ್ತು ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಂಜಾನ್ ಕದನವಿರಾಮ ವಿಸ್ತರಣೆ ನಿರ್ಧಾರದಿಂದ ಹಿಂದೆ ಸರಿದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ರಂಜಾನ್ ಕದನ ವಿರಾಮ ವಿಸ್ತರಣೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಕಳೆದ ಮೇ 17ರಂದು ಪವಿತ್ರ ರಂಜಾನ್ ಮಾಸದ ನಿಮಿತ್ತ ಗಡಿಯಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ರಂಜಾನ್ ಮಾಸದಲ್ಲಿ ಭಾರತೀಯ ಸೇನೆ ಯಾವುದೇ ರೀತಿಯ ಸೈನಿಕ ಕಾರ್ಯಾಚರಣೆ ಮಾಡದಂತೆ, ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡಲು ರಂಜಾನ್ ಕದನ ವಿರಾಮವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರ ಉಗ್ರರ ದಾಳಿ, ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿ ಪ್ರಕರಣಗಳು ಪುನರಾವರ್ತನೆಯಾಗುತ್ತಿರುವುದರಿಂದ ಕದನ ವಿರಾಮ ವಿಸ್ತರಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಶಾಂತಿಯುತವಾಗಿದ್ದರೂ ಉಗ್ರರು ತಮ್ಮ ಉಪಟಳ ಮುಂದುವರೆಸಿದ್ದಾರೆ. ಸರಣಿ ದಾಳಿಗಳಿಂದಾಗಿ ಸೇನೆಯ ಸೈನಿಕರು ಹುತಾತ್ಮರಾಗಿದ್ದಾರೆ. ಉಗ್ರರು ಮತ್ತು ಪಾಕಿಸ್ತಾನ ಸೇನೆಯ ದಾಳಿಯಿಂದಾಗಿ ಕಣಿವೆ ರಾಜ್ಯದ ಜನರಿಗೆ ಅನಾನೂಕೂಲವಾಗುತ್ತಿದೆ. ಹೀಗಾಗಿ ರಂಜಾನ್ ಕದನ ವಿರಾಮ ವಿಸ್ತರಣೆ ಮಾಡದೆ ಶಾಂತಿ ಸ್ಥಾಪನೆಗಾಗಿ ಬೇಕಾದ ಎಲ್ಲ ಕಾರ್ಯಗಳನ್ನು ಕೈಗೊಳ್ಳುವಂತೆ ಸೈನಿಕರಿಗೆ ಆದೇಶಿಸಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Ramzan Ceasefire Won’t Be Extended, Forces To Resume Ops, Rajnath Singh