ಶ್ರೀನಗರ:ಜೂ-16; ಜಮ್ಮು ಮತ್ತು ಕಾಶ್ಮೀರದ ಹಲವೆಡೆಗಳಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ನಾಗರೀಕ ಸಾವನ್ನಪ್ಪಿದ್ದಾನೆ.
ರಂಜಾನ್ ಹಿನ್ನಲೆಯಲ್ಲಿ ಶ್ರೀನಗರದಲ್ಲಿ ಈದ್ಗಾ ಮೈದಾನದಲ್ಲಿ ಇಂದು ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಇಲ್ಲದೆ, ಬಾರಾಮುಲ್ಲಾ, ಸೊಪೋರ್, ಬದ್ಗಾಮ್, ಕುಪ್ವಾರ ಮತ್ತು ಗಂದೇರ್ಬಲ್ ಟೌನ್ ನಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು.
ಅದಾದ ಬಳಿಕ ಅನಂತ್ ನಾಗ್ ಜಿಲ್ಲೆಯ ಜಂಗ್ಲಾತ್ ಮಂಡಿ ಟೌನ್ ನಲ್ಲಿ ಮೊದಲು ಘರ್ಷಣೆಯುಂಟಾಗಿದೆ. ಘರ್ಷಣೆಯಲ್ಲಿ ಬ್ರಕ್ಪೊರಾ ಟೌನ್ ನಿವಾಸಿಯಾಗಿರುವ ಶೀರಜ್ ಅಹ್ಮದ್ ಎಂಬ ಯುವಕ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಗಳನ್ನು ಪ್ರಯೋಗ ಮಾಡಿದ್ದಾರೆ. ಈ ವೇಳೆ ಯುವಕ ಸಾವನ್ನಪ್ಪಿದ್ದಾನೆ.
ಬೆಳಿಗ್ಗೆ 6.45ರ ಸುಮಾರಿಗೆ ಘರ್ಷಣೆ ಸಂಭವಿಸಿದ್ದು, ಪ್ರತಿಭಟನಾಕಾರರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, ಕರ್ತವ್ಯನಿರತ ಭದ್ರತಾ ಪಡೆಗಳ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದಾರೆ.
ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಗಳ ಪ್ರಯೋಗ ಮಾಡಲೇಬೇಕಾಯಿತು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಅನಂತ್ ನಾಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಕೂಡ ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಘರ್ಷಣೆಗಳು ಏರ್ಪಟ್ಟಿತ್ತು. ಈ ವೇಳೆ 9 ವರ್ಷದ ಬಾಲಕ ಮೃತಪಟ್ಟಿದ್ದ. ಬಾಲಕನ ಸಾವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಪುಲ್ವಾಮ ಜಿಲ್ಲೆಯಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.
Jammu and Kashmir, Stone pelting,Civilian killed