ದಾಂಡೇಲಿ: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ನೇರ ನಗದು ವರ್ಗವಣೆ, ಅನುದಾನ ಕಡಿತ ಹಾಗೂ ಹೆಚ್ಚಚ್ಚು ಖಾಸಗಿ ನರ್ಸರಿಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದನ್ನು ವಿರೋಧಿಸಿ ಅಂಗನವಾಡಿ ನೌಕರರ ಸಂಘಟನೆಯ ನೇತೃತ್ವದಲ್ಲಿ ಸಾಮೂಹಿಕ ಸಹಿ ಸಂಗ್ರಹ ಚಳುವಳಿ ನಡೆಸಲಾಗುತ್ತಿದೆ ಎಂದು ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಯಮುನಾ ಗಾಂವಕರ ತಿಳಿಸಿದರು.
ಅವರು ದಾಂಡೇಲಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸಹಿ ಸಂಗ್ರಹಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಮಗುವಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಆದರೆ ಸರಕಾರ ಈಗ ಆ ಆಹಾರದ ಖರ್ಚಿನ ಹಣವನ್ನು ಮಗುವಿನ ಪೋಷಕರ ಹೆಸರಿಗೆ ಹಾಕಲು ಮುಂದಾಗಿದೆ. ಆ ಹಣದಲ್ಲಿ ಮಕ್ಲಳ ಆಹಾರ ಖರೀದಿಸಲು ಸಾದ್ಯವಿಲ್ಲ. ಜೊತೆಗೆ ಹಣವೂ ದುರ್ಬಳಕೆಯಾಗುತ್ತದೆ. ಜೊತೆಗೆ ಆಹಾರದ ಆಕರ್ಷಣೆಯಿಲ್ಲದೇ ಅಂಗನವಾಡಿಗಳಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗುವ ಸಾದ್ಯತೆಯಿದೆ.
ಹಾಗಾಗಿ ಐಸಿಡಿಎಸ್ನಲ್ಲಿ ಪ್ಯಾಕೇಜ್ ಆಹಾರ ಪದ್ದತಿ ಹಾಗೂ ನೇರ ಮತ್ತು ಶರತ್ತುಬದ್ದ ನಗದು ವರ್ಗಾವಣೆಯನ್ನು ತಕ್ಷಣ ನಿಲ್ಲಿಸಬೇಕು. ಐಸಿಡಿಎಸ್ ಖಾಸಗೀಕರಿಸಬಾರದು. ಐಸಿಡಿಎಸ್ ನ್ನು ಸಾರ್ವತ್ರೀಕರಣಗೊಳಿಸಬೇಕು. ಸಾಂಸ್ಥಿಕರಣ ಮಾಡಬೇಕು. ಬಜೆಟ್ ಕಡಿತ ಹಿಂಪಡೆಯಬೇಕು. ಯೋಜನೆಯ ಬಲವರ್ದನೆಗೆ ಕೇಂದ್ರ ಸರಕಾರ ತನ್ನ ಬಜೆಟ್ನಲ್ಲಿ ಸಾಕಷ್ಠು ಹಣ ಹಂಚಿಕೆ ಮಾಡಬೇಕು. 45 ಮತ್ತು 46 ನೇ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಪಾರಸ್ಸು ಜಾರಿ ಮಾಡಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಮಾಸಿಕ 48 ಸಾವಿರ ರೂ.ಗಳಿಗೆ ಕಡಿಮೆಯಿಲ್ಲದಂತಹ ಕನಿಷ್ಠ ಕೂಲಿ ಜಾರಿ ಮಾಡಿ ತಿಂಗಳಿಗೆ 3 ಸಾವಿರ ರೂ ಕಮ್ಮಿಯಿಲ್ಲದ ಸರಕಾರಿ ಭದ್ರತೆಯ ಪಿಂಚಣಿಯನ್ನು ನೀಡಿ ಸಾಮಾಜಿಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ, ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳೀಸುವುದು ಅನಿವಾರ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ರಾಜ್ಯ ಉಪಾಧ್ಯಕ್ಷ ಹರೀಶ ನಾಯ್ಕ, ದಾಂಡೇಲಿ ತಾಲೂಕ ಸಮಗ್ರ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ನಗರಸಭಾ ಸದಸ್ಯೆ ಸುಶೀಲಾ ಕಾಸರಕೋಡ, ರೈತ ಮುಖಂಡ ಮಂಜುನಾಥ ಪುಲಕರ, ಸಿ.ಐ.ಟಿ.ಯು ಕಾರ್ಯದರ್ಶಿ ಸಲಿಂ ಸಯ್ಯದ್, ಅಂಗನವಾಡಿ ನೌಕರರ ಸಂಘಟನೆಯ ತಾಲೂಕು ಅಧ್ಯಕ್ಷೆ ಜಯಶ್ರೀ ಹಿರೇಕರ, ಪ್ರಮುಖರಾದ ಬ್ರಜಿಟಾ, ಪದ್ಮಾ ಕಾಳೆ, ಧನಲಕ್ಷ್ಮಿ ರಾಮದುರ್ಗ, ಸರಿತಾ ಪಾವಲೆ, ಗಿರಿಜಾ ಎಲಿಗಾರ ಮುಂತಾದವರಿದ್ದರು. ಉಪಸ್ಥಿತರಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಾಗರಿಕರು ಸಹಿ ಸಂಗ್ರಹ ಚಳುವಳಿಯಲ್ಲಿ ಪಾಲ್ಗೊಂಡರು.