ಬಡ್ತಿ ಮೀಸಲು ರಾಜ್ಯ ಸರಕಾರಿ ಹುದ್ದೆಗಳಿಗೂ ಅನ್ವಯ: ಪಾಸ್ವಾನ್‌

ಹೊಸದಿಲ್ಲಿ: ಬಡ್ತಿ ಮೀಸಲಾತಿ ಪ್ರಕ್ರಿಯೆ ಪುನರಾರಂಭಿಸುವುದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಕೇಂದ್ರ ಸರಕಾರದ ಜತೆ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

ಬುಧವಾರ ದಿಲ್ಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಪಾಸ್ವಾನ್‌ ಈ ವಿಷಯ ತಿಳಿಸಿದರು.

”ಕೇಂದ್ರದ ಪ್ರಸ್ತಾವ ಅನುಸರಿಸಿ ನ್ಯಾಯಾಲಯ ನೀಡಿರುವ ನಿರ್ದೇಶನವು ಕೇಂದ್ರ ಸರಕಾರಿ ಉದ್ಯೋಗಗಳಿಗಷ್ಟೇ ಅನ್ವಯವಾಗುತ್ತವೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈಗ ಗೊಂದಲಗಳೇನೂ ಇಲ್ಲ. ಕೇಂದ್ರ ಸರಕಾರದ ಜತೆ ರಾಜ್ಯ ಸರಕಾರಗಳೂ ಉದ್ಯೋಗಿಗಳಿಗೆ ಬಡ್ತಿ (ಮೀಸಲಾತಿಯಂತೆ) ನೀಡಲಾರಂಭಿಸುತ್ತವೆ. ಇದಕ್ಕೆ ಸಂಬಂಧಪಟ್ಟಂತೆ ಶೀಘ್ರದಲ್ಲೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿರ್ದೇಶನ ನೀಡುತ್ತದೆ,” ಎಂದು ಪಾಸ್ವಾನ್‌ ತಿಳಿಸಿದರು.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌, ಗೃಹ ಸಚಿವ ರಾಜನಾಥ್‌ ಸಿಂಗ್‌, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ