ಚಾರ್ಮುಡಿ ಘಾಟ್‍ನಲ್ಲಿ ಮಣ್ಣು ಕುಸಿತ: ತೆರವು ಕಾರ್ಯ

ಚಿಕ್ಕಮಗಳೂರು/ಹಾಸನ, ಜೂ.13- ಭಾರೀ ಮಳೆಯಿಂದಾಗಿ ಚಾರ್ಮುಡಿ ಘಾಟ್‍ನಲ್ಲಿ ಮಣ್ಣು ಕುಸಿತದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರಸ್ತೆ ಬಂದ್ ಮಾಡಿ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ.
ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ ವಾಹನಗಳಲ್ಲೇ ಉಳಿದು ಹಿಂದಿರುಗಿ ಬರದೇ ಮುಂದಕ್ಕೂ ಹೋಗದೆ ಇಡೀ ರಾತ್ರಿ ಕಾಡಿನ ಮಧ್ಯದಲ್ಲಿಯೇ ಉಳಿಯುವ ಪ್ರಸಂಗ ಎದುರಾಯಿತು.
ಸ್ಥಳೀಯರ ಸಹಾಯದಿಂದ ನೀರು, ಆಹಾರ ಪಟ್ಟಣಗಳನ್ನು ಪ್ರವಾಸಿಗರಿಗೆ ತಲುಪಿಸಲಾಯಿತು.
ಚಾರ್ಮುಡಿ ಘಾಟ್‍ನಲ್ಲಿ ಕೆಲವು ಕಡೆ ಮಣ್ಣು ಕುಸಿದಿದ್ದು , ಮರಗಳು ಬಿದ್ದಿವೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲಾಡಳಿತದ ಜೆಸಿಬಿ ಸಹಾಯದಿಂದ ತೆರವು ಕಾರ್ಯ ನಡೆಯುತ್ತಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸ್ಥಳದಲ್ಲೇ ಮೊಕ್ಕಾಂ ಹೂಡಿ ಮಳೆಯನ್ನು ಲೆಕ್ಕಿಸದೆ ಕಾರ್ಯಾಚರಣೆಯಲ್ಲಿ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.
ಎಡಬಿಡದೇ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು , ಅಲ್ಲೇ ಅಲ್ಲೇ ಮಣ್ಣು ಕುಸಿತ ಕಂಡು ಬರುತ್ತಿದೆ. ವಾಹನ ಚಾಲಕರು ಉಸಿರು ಬಿಗಿದು ಹಿಡಿದುಕೊಂಡು ಹಳ್ಳ ಕೊಳ್ಳದ ರಸ್ತೆಯಲ್ಲಿ ವಾಹನಗಳ ಚಾಲನೆ ಮಾಡುತ್ತಿದ್ದಾರೆ.
ಬ್ಯಾರಿಕೇಡ್ ಬಳಸಿ ಚಾರ್ಮುಡಿ ಘಾಟ್ ಪ್ರವೇಶಿಸದೆ ನಿರ್ಬಂಧ ಹೇರಲಾಗಿದೆ. ಕುದುರೆ ಮುಖ , ಕಾರ್ಕಳ ಮಾರ್ಗದಲ್ಲಿ ಮಂಗಳೂರಿಗೆ ವಾಹನಗಳು ಸಂಚರಿಸುತ್ತಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ತೆರವು ಕಾರ್ಯ ಪೂರ್ಣಗೊಳ್ಳಲಿದ್ದು , ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಎಸ್ಪಿ ತಿಳಿಸಿದರು.
ಮುಂಗಾರು ಅಬ್ಬರ ಹಾಸನದಲ್ಲೂ ಜೋರಾಗಿದ್ದು , ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ. ಹೇಮಾವತಿ ಜಲಾಶಯಕ್ಕೆ ಒಂದೇ ದಿನ 37.103 ಕ್ಯೂಸೆಕ್ಸ್ ಒಳ ಹರಿವು ಬಂದಿದ್ದು ,ಒಂದೇ ದಿನದಲ್ಲಿ ಹೇಮಾವತಿ ಜಲಾಶಯಕ್ಕೆ 5.60 ಟಿಎಂಸಿ ಒಳ ಹರಿವು ಹೆಚ್ಚಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಹೇಮಾವತಿಯ ನೀರಿನ ಒಡಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು , ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಸಕಲೇಶಪುರ ತಾಲ್ಲೂಕಿನ ಎಡಕುಮರೆಯಲ್ಲಿ ಗುಡ್ಡ ಕುಸಿದು ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಗುಡ್ಡವನ್ನು ತೆರವುಗೊಳಿಸಿದ್ದಾರೆ.
ಸಕಲೇಶಪುರದ ಒಳ ಮಲ್ಲೇಶ್ವರ ದೇವಾಲಯ ನೀರಿನಲ್ಲಿ ಮುಳುಗಡೆಗೊಂಡಿದ್ದು, ರಾಗಿ ಗುಂಡಿ , ಮಜ್ಜನಹಳ್ಳಿ, ಕ್ಯಾನಹಳ್ಳಿ ಗ್ರಾಮಗಳ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು , ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಬೇಲೂರು ವರದಿ: ಬೇಲೂರು ತಾಲ್ಲೂಕಿನ ನಾರ್ವೆ ಗ್ರಾಮಕ್ಕೆ ತೆರಳುವ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಹದ್ದಿಕಟ್ಟೆ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಈ ಭಾಗ ದ್ವೀಪದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ