ಹೊಸ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತಂತೆ ಅಧಿಕಾರಿಗಳ ಸಭೆ – ಸಚಿವ ಹೆಚ್.ಡಿ ರೇವಣ್ಣ

ಹಾಸನ ಜೂ.13 ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಬಗೆ ಹರಿಸುವುದು ಹಾಗೂ ಹೊಸ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತಂತೆ ಗುರುವಾರ ಹಾಗೂ ಶುಕ್ರವಾರ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಸಮಗ್ರ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು 2 ದಿನಗಳ ಸಭೆ ಕರೆಯಲಾಗಿದೆ ಇದರಲ್ಲಿ ತುರ್ತು ಸಮಸ್ಯೆಗಳ ಶೀಘ್ರ ಇತ್ಯರ್ಥ ಹಾಗೂ ದೂರಗಾಮಿ ಚಿಂತನೆಗಳ ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುವುದು ಎಂದರು.
ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕುಗಳ ಮತ್ತು ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಆಗಿರುವ ಮಳೆಹಾನಿ ಕುರಿತಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಈಗಾಗಲೇ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಸಾಕಾರಗೊಂಡಿರುವ ವಿದ್ಯುತ್ ಪೂರೈಕೆಯನ್ನು ತಕ್ಷಣ ಸರಿಪಡಿಸಲು ಸೂಚಿಸಲಾಗಿದೆ ಎಂದರು.
ಮಳೆ ಹೆಚ್ಚು ಸುರಿಯುವ ಸ್ಥಳಗಳಲ್ಲಿ ವಿಪತ್ತು ಪರಿಹಾರ ತಂಡಗಳನ್ನು ಸ್ಥಾಪಿಸಲು ತಿಳಿಸಲಾಗಿದೆ. ಹಾಸನ ನಗರ ವ್ಯಾಪ್ತಿಯ ನಾಲ್ಕು ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳಿಗೆ ನಿನ್ನೆ ಅನುಮೋದನೆ ನೀಡಲಾಗಿದ್ದು ಇನ್ನೆರಡು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಸಚಿವ ರೇವಣ್ಣ ಹೇಳಿದರು.
375 ಕೋಟಿ ರೂಪಾಯಿ ವೆಚ್ಚದ ಹಾಸನ-ಎಡೆಗೌಡನಹಳ್ಳಿ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ ಹಲವು ಫ್ಲೈಓವರ್ ಮತ್ತು ತಿರುವು ನೇರಗೊಳಿಸುವ ಕಾಮಗಾರಿಗಳು ನಡೆಯಲಿವೆ ಎಂದು ಸಚಿವ ರೇವಣ್ಣ ಅವರು ಹೇಳಿದರು. ಶಿರಾಡಿಘಾಟ್ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು ಕೆಲವು ದಿನ ಕ್ಯೂರಿಂಗ್ ಅವಧಿ ಅಗತ್ಯವಿದೆ ಆದಷ್ಟು ಬೇಗನೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಸಚಿವರು ವಿವರಿಸಿದರು.
ಮುಂದಿನ ವಾರ ಸಾರಿಗೆ ಸಚಿವರನ್ನು ಹಾಸನಕ್ಕೆ ಕರೆಸಿಕೊಂಡು ನೂತನ ಬಸ್ ನಿಲ್ದಾಣದಿಂದ ಆಸ್ಪತ್ರೆವರೆಗೆ ರಸ್ತೆ ನಿರ್ಮಾಣ ಕೆಲಸದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ