ಒಂದೆರಡು ದಿನಗಳಲ್ಲಿ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ

 

ಬೆಂಗಳೂರು, ಜೂ.12- ಕೆಲವು ಸಚಿವರ ಸಣ್ಣಪುಟ್ಟ ಖಾತೆಗಳನ್ನು ಬದಲಾವಣೆ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒಂದೆರಡು ದಿನಗಳಲ್ಲಿ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನೂ ನೀಡಲಿದ್ದಾರೆ.
ತಮಗೆ ಖಾತೆ ಬದಲಾವಣೆ ಮಾಡಿಕೊಡಬೇಕೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮನವಿ ಮಾಡಿಕೊಂಡ ಕಾರಣ ಅವರ ನಿರೀಕ್ಷೆಯಂತೆ ಸಹಕಾರ ಖಾತೆ ಸಿಗುವ ಸಾಧ್ಯತೆಗಳಿವೆ.

ಹಾಲಿ ಸಹಕಾರ ಖಾತೆ ಸಚಿವ ಬಂಡೆಪ್ಪಕಾಶಂಪುರ್‍ಗೆ ಖಾತೆ ಬದಲಾವಣೆಯಾಗಲಿದ್ದು, ಉನ್ನತ ಶಿಕ್ಷಣ ಇಲ್ಲವೇ ಅಬಕಾರಿ ಖಾತೆಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಉಭಯ ಸಚಿವ ಖಾತೆ ಬದಲಾವಣೆ ಸಂಬಂಧ ಜೆಡಿಎಸ್ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿ ಸಮ್ಮತಿ ಪಡೆದುಕೊಂಡಿದ್ದಾರೆ.

ತಮಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದರಿಂದ ಖಾತೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಬೇರೊಂದು ಖಾತೆ ನೀಡುವಂತೆ ನಿನ್ನೆಯಷ್ಟೆ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಗೌಡರ ಬಳಿ ಮನವಿ ಮಾಡಿಕೊಂಡಿದ್ದರು.
ಇಬ್ಬರು ಸಚಿವರ ಜತೆ ಮಾತುಕತೆ ನಡೆಸಿದ ಬಳಿಕವೇ ಖಾತೆ ಬದಲಾವಣೆಗೆ ಪಕ್ಷ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಉಳಿದಂತೆ ಬೇರೆ ಯಾವುದೇ ಸಚಿವರ ಖಾತೆಗಳನ್ನು ಬದಲಾವಣೆ ಮಾಡಬಾರದು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಸಾರಿಗೆ ಖಾತೆ ಮೇಲೆ ಕಣ್ಣಿಟ್ಟು ಮುನಿಸಿಕೊಂಡಿದ್ದ ಸಿ.ಎಸ್.ಪುಟ್ಟರಾಜುಗೆ ಈಗ ನೀಡಿರುವ ಸಣ್ಣ ನೀರಾವರಿ ಖಾತೆಯಲ್ಲೇ ಮುಂದುವರೆಯಬೇಕೆಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಇದಕ್ಕೆ ಪುಟ್ಟರಾಜು ಕೂಡ ಒಪ್ಪಿಗೆ ನೀಡಿ, ಖಾತೆ ವಿಷಯದಲ್ಲಿ ಯಾವುದೇ ಕ್ಯಾತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾವಾರು ಹಂಚಿಕೆ:
ಇನ್ನು ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್‍ನಲ್ಲಿ ಭಿನ್ನಮತ ಬಹುತೇಕ ಶಮನವಾಗಿರುವ ಹಿನ್ನೆಲೆಯಲ್ಲಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡಲು ಮುಂದಾಗಿದ್ದಾರೆ.
ಪ್ರತಿಷ್ಠಿತ ರಾಮನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡುವ ಮೂಲಕ ತ್ಯಾಗ ಮಾಡಲು ಮುಂದಾಗಿದ್ದಾರೆ.

ಸರ್ಕಾರ ಮತ್ತು ಪಕ್ಷಗಳ ನಡುವೆ ಯಾವುದೇ ರೀತಿಯ ತಾರತಮ್ಯ ಉಂಟಾಗದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿಗಳು, ಡಿ.ಕೆ.ಶಿವಕುಮಾರ್‍ಗೆ ತಮ್ಮ ತವರು ಜಿಲ್ಲೆಯನ್ನು ಉಸ್ತುವಾರಿ ನೀಡುವ ಮೂಲಕ ರಾಜಕೀಯ ಜಾಣ್ಮೆ ಪ್ರದರ್ಶಿಸಿಸಲು ತೀರ್ಮಾನಿಸಿದ್ದಾರೆ.
ಉಳಿದಂತೆ ಎಚ್.ಡಿ.ರೇವಣ್ಣಗೆ ಹಾಸನ, ಮೈಸೂರಿಗೆ ಜಿ.ಟಿ.ದೇವೇಗೌಡ, ತುಮಕೂರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಮತ್ತಿತರ ಸಚಿವರಿಗೆ ಜಿಲ್ಲಾ ಉಸ್ತುವಾರಿಯನ್ನು ಒಂದೆರಡು ದಿನಗಳಲ್ಲಿ ಹಂಚಿಕೆ ಮಾಡಲಿದ್ದಾರೆ.
ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರು:
ಡಾ.ಜಿ.ಪರಮೇಶ್ವರ್ -ತುಮಕೂರು
ಡಿ.ಕೆ.ಶಿವಕುಮಾರ್ -ರಾಮನಗರ
ಎಚ್.ಡಿ.ರೇವಣ್ಣ -ಹಾಸನ
ಯು.ಟಿ.ಖಾದರ್ -ಮಂಗಳೂರು
ಆರ್.ವಿ.ದೇಶಪಾಂಡೆ -ಉತ್ತರ ಕನ್ನಡ
ಜಿ.ಟಿ.ದೇವೇಗೌಡ -ಮೈಸೂರು
ಡಿ.ಸಿ.ತಮ್ಮಣ್ಣ -ಮಂಡ್ಯ
ಪುಟ್ಟರಂಗಶೆಟ್ಟಿ -ಚಾಮರಾಜನಗರ
ಎನ್.ಎಚ್.ಶಿವಶಂಕರರೆಡ್ಡಿ -ಚಿಕ್ಕಬಳ್ಳಾಪುರ
ಕೃಷ್ಣಬೈರೇಗೌಡ -ಕೋಲಾರ
ಕೆ.ಜೆ.ಜಾರ್ಜ್ -ಬೆಂಗಳೂರುನಗರ
ರಮೇಶ್ ಜಾರಕಿಹೊಳಿ -ಬೆಳಗಾವಿ
ಪ್ರಿಯಾಂಕ್‍ಖರ್ಗೆ -ಗುಲ್ಬರ್ಗ
ಶಿವಾನಂದ್ ಪಾಟೀಲ್ -ವಿಜಯಪುರ
ಬಂಡೆಪ್ಪ ಕಾಶಂಪುರ್ -ಬೀದರ್
ರಾಜಶೇಖರ್ ಪಾಟೀಲ್ -ಬಾಗಲಕೋಟೆ
ಆರ್.ಶಂಕರ್ -ಹಾವೇರಿ
ಜಯಮಾಲಾ -ಶಿವಮೊಗ್ಗ
ಎಂ.ಸಿ.ಮನಗೂಳಿ -ಕೊಪ್ಪಳ
ವೆಂಕಟರಾವ್ ನಾಡಗೌಡ -ರಾಯಚೂರು
ಎಸ್.ಆರ್.ಶ್ರೀನಿವಾಸ್ -ಚಿಕ್ಕಮಗಳೂರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ