ನಾನು ಕಿರಿಯನಲ:. ಐದು ಬಾರಿ ಶಾಸಕನಾಗಿದ್ದೇನೆ: ದಿನೇಶ್‍ಗುಂಡೂರಾವ್

 

ಬೆಂಗಳೂರು, ಜೂ.12-ನಾನು ಕಿರಿಯನಲ್ಲ. ಐದು ಬಾರಿ ಶಾಸಕನಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವ ಸಾಮಥ್ರ್ಯ ನನಗಿದೆ ಎಂದು ಹೇಳುವ ಮೂಲಕ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ತಾವು ಪಕ್ಷದ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬ ಸಂದೇಶ ರವಾನಿಸಿದ್ದಾರೆ.
ಇತ್ತೀಚಿಗೆ ನಡೆದ ಸಂಸದರ ಸಭೆಯಲ್ಲಿ ಹಿರಿಯರು ಹಾಗೂ ಅನುಭವಿಗಳನ್ನು ಕೆಪಿಸಿಸಿ ಸ್ಥಾನಕ್ಕೆ ನೇಮಿಸಬೇಕೆಂದು ಒತ್ತಾಯಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಜೋರಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಮತ್ತೊಂದು ರೀತಿಯ ಬಣ ರಾಜಕೀಯ ತಲೆ ಎತ್ತಿದೆ.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ದಿನೇಶ್‍ಗುಂಡೂರಾವ್‍ಗೆ ಬೆಂಬಲ ವ್ಯಕ್ತಪಡಿಸಿದರೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರ ಬಣ ಹಿರಿಯರನ್ನು ನೇಮಿಸಬೇಕೆಂದು ಲಾಬಿ ನಡೆಸುತ್ತಿದೆ. ಈ ನಡುವೆ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಸ್.ಆರ್.ಪಾಟೀಲ್ ಅವರುಗಳೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.

ದಿನೇಶ್‍ಗುಂಡೂರಾವ್ ಅವರು ಕಿರಿಯರಾಗಿದ್ದು, ಅವರ ಬದಲಿಗೆ ಹಿರಿಯರನ್ನು ಪರಿಗಣಿಸುವಂತೆ ಇತ್ತೀಚೆಗೆ ಸಂಸದರು ನೀಡಿದ ಸಲಹೆಗೆ ಪ್ರತಿಕ್ರಿಯಿಸಿರುವ ದಿನೇಶ್‍ಗುಂಡೂರಾವ್, ನಾನು ಐದು ಬಾರಿ ಶಾಸಕನಾಗಿದ್ದೇನೆ. ನನಗೂ ಹಿರಿತನವಿದೆ, ಅನುಭವವಿದೆ. ಈ ವರೆಗೂ ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕೊಟ್ಟರೆ ಅದನ್ನೂ ನಿಭಾಯಿಸಲು ಸಿದ್ಧನಿದ್ದೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಮಾಡಿರುವ ಟೀಕೆಗೆ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್‍ಗುಂಡೂರಾವ್, ಒಡಕಿನ ಮಾತುಗಳನ್ನು ಯಾರೂ ಆಡಬಾರದು, ಸಮ್ಮಿಶ್ರ ಸರ್ಕಾರವನ್ನು ಸುಭದ್ರಗೊಳಿಸಲು ಪ್ರಯತ್ನಿಸಬೇಕು. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನದ ಮಾತುಗಳನ್ನಾಡಿ ಅಪಸ್ವರ ಎತ್ತುವುದು ಸರಿಯಲ್ಲ. ಸೂಕ್ತ ಸಂದರ್ಭದಲ್ಲಿ ಪಕ್ಷ ಎಲ್ಲರಿಗೂ ಅವಕಾಶಗಳನ್ನು ನೀಡುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ