ಎಸ್ ಸಿ ಓ ಸದಸ್ಯ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ಭಾರತ ಆದ್ಯತೆ- ಪ್ರಧಾನಿ ನರೇಂದ್ರ ಮೋದಿ

ಕ್ವಿಂಗ್ಡಾವೊ:  ಎಸ್ ಸಿ ಓ ಸದಸ್ಯ ರಾಷ್ಟ್ರಗಳು ಹಾಗೂ ನೆರಹೊರೆಯ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ಭಾರತ ಆದ್ಯತೆ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  ದೈಹಿಕ ಹಾಗೂ ಡಿಜಿಟಲ್  ಸಂಪರ್ಕದಿಂದ ಭೌಗೋಳಿಕತೆಯ ಅರ್ಥವನ್ನೇ ಬದಲಾಯಿಸಬಹುದಾಗಿದೆ. ಆದ್ದರಿಂದ  ಎಸ್ ಸಿ ಓ ಸದಸ್ಯ ರಾಷ್ಟ್ರಗಳು ಹಾಗೂ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಪರ್ಕಕ್ಕೆ ಭಾರತ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.

ಕ್ವಿಂಗ್ಡಾವೊದಲ್ಲಿನ ಅಂತಾರಾಷ್ಟ್ರೀಯ ಕನ್ ವೆನ್ ಸನ್ ಸೆಂಟರ್ ನಲ್ಲಿ ಎಸ್ ಸಿಓ ಶೃಂಗಸಭೆಯ ಎರಡನೇ ದಿನದ ಇಂದು  ಸಮಗ್ರ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ನರೇಂದ್ರಮೋದಿ, ಪ್ರವಾಸೋದ್ಯಮದ ಬಗ್ಗೆಯೂ ಬೆಳಕು ಚೆಲ್ಲಿದರು.  ಎಸ್ ಸಿ ಓ ರಾಷ್ಟ್ರಗಳ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು  ಭಾರತಕ್ಕೆ ಭೇಟಿ ನೀಡಲು  ಭಾರತ ಅಗತ್ಯ ಸೌಕರ್ಯ ಒದಗಿಸುವುದಾಗಿ ಹೇಳಿದರು.

ಭಾರತಕ್ಕೆ ಬರುವ ಪ್ರವಾಸಿಗರಲ್ಲಿ ಕೇವಲ ಶೇ. 6 ರಷ್ಟು ಮಂದಿ ಎಸ್ ಸಿ ಓ ಸದಸ್ಯತ್ವ ಹೊಂದಿದ್ದ ರಾಷ್ಟ್ರಗಳದವರಾಗಿದ್ದಾರೆ. ನಮ್ಮ ಸಂಸ್ಕೃತಿ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಮೂಲಕ  ಪ್ರವಾಸಿಗರ ಸಂಖ್ಯೆಯನ್ನ ದ್ವಿಗುಣಗೊಳಿಸಬಹುದು. ಭಾರತದಲ್ಲಿ ಬೌಧ ಧರ್ಮಿಯರ  ಹಬ್ಬ ಹಾಗೂ ಎಸ್ ಸಿ ಓ ಆಹಾರೋತ್ಸವನನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಶನಿವಾರ ಕ್ವಿಂಗ್ಡಾವೊಗೆ ಆಗಮಿಸಿದ್ದ ಪ್ರಧಾನಿ ನರೇಂದ್ರಮೋದಿ  ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹಾಗೂ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ , ಮತ್ತು ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಪ್ ಗನಿ ಅವರೊಂದಿಗೆ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಭಯೋತ್ಪಾದನೆ ವಿಷಯ  ಕುರಿತಂತೆಯೂ ಮಾತನಾಡಿದ ನರೇಂದ್ರಮೋದಿ, ಅಪ್ಘಾನಿಸ್ತಾನ ಇದಕ್ಕೆ ಉದಾಹರಣೆಯಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.  ಶಾಂತಿ ಮರು ಸ್ಥಾಪನೆ ನಿಟ್ಟಿನಲ್ಲಿ ಅಪ್ಘಾನಿಸ್ತಾನ ಅಧ್ಯಕ್ಷರು ದೃಢ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಎಸ್ ಸಿ ಓ ಸದಸ್ಯ ರಾಷ್ಟ್ರಗಳು  ಕ್ವಿಂಗ್ಡಾವೊ ಒಪ್ಪಂದಕ್ಕೆ ಸಹಿ ಹಾಕಿದವು.  ಭದ್ರತೆ, ಆರ್ಥಿಕ ಸಹಕಾರ, ಮತ್ತು ಜನರಿಂಂದ ಜನರಿಗೆ ವಿನಿಮಯಕ್ಕೆ  ಸಹಿಹಾಕಲಾಯಿತು.  ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತೆ  ಪರಿಸ್ಥಿತಿ ಬಗ್ಗೆ ವಿಶ್ಲೇಷಣೆ ನಡೆಸಿದ ನಾಯಕರು, ಸಹಕಾರ ಕ್ರಮಕ್ಕಾಗಿ ಚರ್ಚೆ ನಡೆಸಿದರು.

ಎಸ್ ಸಿ ಓದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದ ನಂತರ ಭಾರತ ಇದೇ ಮೊದಲ ಬಾರಿಗೆ ಪಾಲ್ಗೊಂಡಿದೆ.  ಕಜಕಿಸ್ತಾನದಲ್ಲಿ  2017 ರಲ್ಲಿ ನಡೆದ ಅಸ್ತಾನ ಶೃಂಗಸಭೆ ವೇಳೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದುಕೊಂಡಿದ್ದವು.

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ  ಚೀನಾದಿಂದ ಹೊರಡಲಿದ್ದು,  ರಾತ್ರಿ 10 ಗಂಟೆಗೆ ದೆಹಲಿಗೆ ಆಗಮಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ