ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ ಬೆಂಬಲಿಗರಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನೆ ಮುಂದೆ ಪ್ರತಿಭಟನೆ

 

ಬೆಂಗಳೂರು, ಜೂ.9- ಸಚಿವ ಸ್ಥಾನದ ಆಕಾಂಕ್ಷಿ ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ ಬೆಂಬಲಿಗರು ಇಂದು ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಮುನಿಯಪ್ಪ ಅವರು ಅತ್ಯಂತ ಹಿರಿಯ ಶಾಸಕರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ರಾಜಕೀಯ ಒತ್ತಡಗಳಿಗೆ ಒಳಗಾಗಿ ಮುನಿಯಪ್ಪ ಅವರಿಗೆ ಸ್ಥಾನ ತಪ್ಪಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿರಿಯ ನಾಯಕರಾದ ಅವರನ್ನು ಸಂಪಟಕ್ಕೆ ತೆಗೆದುಕೊಳ್ಳಬೇಕೆಂದು ಬೆಂಬಲಿಗರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೆಂಬಲಿಗರ ಜತೆ ಮಾತುಕತೆ ನಡೆಸಿದ ಪರಮೇಶ್ವರ್, ಮುನಿಯಪ್ಪ ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುವ ಭರವಸೆ ನೀಡಿದರು.

ಮುಂದಿನ ಬಾರಿ ದೆಹಲಿಗೆ ಹೋದಾಗ ಹೈಕಮಾಂಡ್‍ಗೆ ಪರಿಸ್ಥಿತಿಯನ್ನು ವಿವರಿಸಿ ಅವರ ಪರವಾಗಿ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ಮೊದಲು ಧರ್ಮಸಿಂಗ್ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಆರು ತಿಂಗಳು ನನ್ನನ್ನು ಸಂಪುಟದಿಂದ ಹೊರಗಿಡಲಾಗಿತ್ತು. ನಾನು ಸಾಕಷ್ಟು ಹೋರಾಟ ಮಾಡಿದ ನಂತರವೇ ಅವಕಾಶ ಸಿಕ್ಕಿದ್ದು, ಮುನಿಯಪ್ಪ ಅವರು ಹಿರಿಯ ನಾಯಕರು, ತಾಳ್ಮೆಯಿಂದ ಇರಬೇಕು. ಅವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಮುನಿಯಪ್ಪ ಅವರ ಬೆಂಬಲಿಗರಿಗೆ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ