ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

 

ಬೆಂಗಳೂರು, ಜೂ.9- ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಪಕ್ಷ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಳಿ ಮನವಿ ಮಾಡಿರಲಿಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ ಸಮುದಾಯದ ಬದುಕು ಹಸನಾಗಬೇಕೆಂದು ಬಯಸಿದ್ದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಸಂಕಷ್ಟ ದೂರವಾಗಬೇಕು ಎಂಬುದೇ ತಮ್ಮ ಅಪೇಕ್ಷೆ ಎಂದು ತಿಳಿಸಿದರು.
ಜಯಪ್ರಕಾಶ್ ನಾರಾಯಣ್ ಅವರ ಆಂದೋಲನದ ಸಂದರ್ಭದಲ್ಲಿ ರಾಜಕೀಯ ಪ್ರವೇಶ ಮಾಡಿದ್ದು, ಅಂದಿನಿಂದ ಇಂದಿನವರೆಗೂ ಜನತಾ ದಳದಲ್ಲೇ ನಿಷ್ಟೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ತಾವು ಇದೇ ಪಕ್ಷದಲ್ಲಿ ಕೊನೆಯವರೆಗೂ ಇರುವುದಾಗಿ ಹೇಳಿದರು.

ಎರಡು-ಮೂರು ಪಕ್ಷಗಳನ್ನು ಬದಲಿಸುವಂತಹ ಜಾಯಮಾನ ತಮ್ಮದಲ್ಲ. ಖಾತೆ ಹಂಚಿಕೆ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರಿಗೆ ಬೇಸರ ಉಂಟಾಗಿರುವುದು ನಿಜ. ಆದರೆ, ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡದಂತೆ ಮನವಿ ಮಾಡಿದ್ದೇನೆ ಎಂದರು.
ತಮ್ಮ ಮನೆ ದೇವರ ಪೂಜೆಗೆ ದೇವಾಲಯಕ್ಕೆ ಹೋಗುವುದಾಗಿ ನಿನ್ನೆ ರಾತ್ರಿಯೇ ದೇವೇಗೌಡರಿಗೆ ಮಾಹಿತಿ ನೀಡಿರುವುದಾಗಿ ಪುಟ್ಟರಾಜು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ