ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು, ಜೂ.9-ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ಮಾಡುವುದಕ್ಕಿಂತ ಜನರ ಸಮಸ್ಯೆ ಬಗೆಹರಿಸಲು ರೂಪುರೇಷೆ ಸಿದ್ಧಪಡಿಸುತ್ತಿರುವುದಾಗಿ ಹೇಳಿದ ಅವರು,ರಾಜಕೀಯ ಮಾಡಲು ಬೇರೆಯವರಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಐದು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರುತ್ತದೆ. ಪ್ರಸ್ತುತ ಕೆಲವೊಂದು ಸಮಸ್ಯೆಗಳು ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ತಾವು ಏಕಾಂಗಿಯಾಗಲು ಸಾಧ್ಯವಿಲ್ಲ ಎಂದ ಅವರು, ಸರ್ಕಾರ ಬೀಳುತ್ತೆ ಎಂದು ಹಗಲುಗನಸು ಕಾಣುವವರು ಕಾಣುತ್ತೀರಲಿ ಎಂದು ವಿರೋಧಿ ಬಣಕ್ಕೆ ಟಾಂಗ್ ನೀಡಿದರು.

ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂದಾದರೂ ರೈತ ಸಾಲ ಮನ್ನಾ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಾಲ ಮನ್ನಾ ಮಾಡುವ ವಿಚಾರದಲ್ಲಿ ಏನು ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಅಂಥವರಿಂದ ಪಾಠ ಕಲಿಯಬೇಕಿಲ್ಲ. ರೈತರ ಸಾಲ ಮನ್ನಾ ಮಾಡುವುದಷ್ಟೇ ಅಲ್ಲ, ಮತ್ತೆ ಸಾಲಗಾರರಾಗದಂತೆ ಕ್ರಮಕೈಗೊಳ್ಳಲಾಗುವುದು. ನಿನ್ನೆ ಇಸ್ರೇಲ್ ಪರಿಣಿತರ ತಂಡದ ಜೊತೆ ಸಭೆ ನಡೆಸಲಾಗಿದೆ ಎಂದರು.
ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಅಥಣಿ ಕ್ಷೇತ್ರದ ಜನರೇ ಶಾಪ ಹಾಕಿ ಕೂರಿಸಿದ್ದಾರೆ. ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನಹರಿಸಲಿ. 10-15 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಸಚಿವರಲ್ಲಿ ಅಸಮಾಧಾನವಿಲ್ಲ:
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಯಾರೂ ಕೂಡ ಅಸಮಾಧಾನಗೊಂಡಿಲ್ಲ. ತಮ್ಮ ಬಳಿ ಯಾರೂ ಕೂಡ ಅಸಮಾಧಾನವನ್ನು ತೋಡಿಕೊಂಡಿಲ್ಲ. ಅಲ್ಲದೆ, ಇಂತಹ ಖಾತೆಯೇ ಬೇಕು ಎಂದು ಯಾರೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರಾಗಿ ಸೇವೆ ಸಲ್ಲಿಸಲು ಉನ್ನತ ಶಿಕ್ಷಣ, ನೀರಾವರಿಗಿಂತ ಉತ್ತಮ ಖಾತೆಗಳು ಬೇಕೇ? ಹಣಕಾಸು ಖಾತೆ ಬೇಕೆ? ಇಂತಹ ಖಾತೆ ಬೇಕೆಂದು ಅಸಮಾಧಾನಗೊಂಡವರು ಕೇಳಬೇಕಲ್ಲವೇ?ಮಂತ್ರಿಯಾಗಿ ಸಮರ್ಥವಾಗಿ ಕೆಲಸ ಮಾಡಬೇಕು ಎಂದರು.
ಮೊದಲು ಮಂತ್ರಿ ಸ್ಥಾನ ಕೇಳುತ್ತಾರೆ, ಆನಂತರ ವಿಧಾನಸೌಧದಲ್ಲಿ ಮೂರನೇ ಮಹಡಿಯ ಕಚೇರಿ ಕೇಳುತ್ತಾರೆ. ಆನಂತರ ಸರ್ಕಾರಿ ಮನೆ ಕೇಳುತ್ತಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರ ಹತ್ಯೆ ಸಂಚಿಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿದೆ ಎಂದು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಇದು ಸೂಕ್ಷ್ಮ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ