ಹೈದರಾಬಾದ್: ದೇಶದಲ್ಲಿ ಕಾಂಗ್ರೆಸ್ ಕಥೆ ಮುಕ್ತಾಯವಾಯಿತು ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡ ವಿಚಾರವನ್ನು ಉದ್ದೇಶಿಸಿ ಕಾಂಗ್ರೆಸ್ ವಿರುದ್ಧ ಒವೈಸಿ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಹೈದರಾಬಾದ್ ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಒವೈಸಿ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಥೆ ಮುಗಿಯಿತು. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಇನ್ನಾವುದೇ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ.
‘ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಥೆ ಮುಗಿಯಿತು. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಇನ್ನಾವುದೇ ಭವಿಷ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಜೀವನದ ಬರೊಬ್ಬರಿ 50 ವರ್ಷಗಳ ಕಾಲ ದುಡಿದ ವ್ಯಕ್ತಿಯೊಬ್ಬರು ರಾಷ್ಚ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ನೆರವಾಗಬಲ್ಲದು ಎಂಬ ಜನರ ಭಾವನೆ ಈ ಬೆಳವಣಿಗೆಯಿಂದ ಸಂಪೂರ್ಣ ನಶಿಸಿ ಹೋಗಿದೆ. ಮತ್ತೆ ಕಾಂಗ್ರೆಸ್ ಮೇಲೆ ನಾವು ಅದ್ಯಾವ ನಂಬಿಕೆ ಇಡಬೇಕು ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇತ್ತೀಚೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಆರ್ ಎಸ್ ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ನಾಯಕ ಹುಬ್ಬೇರುವಂತೆ ಮಾಡಿದ್ದರು. ಅಲ್ಲದೆ ಸ್ವತಃ ಪ್ರಣಬ್ ಪುತ್ರಿ ಶರ್ಮಿಷ್ಟಾ ಕೂಡ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ವಿರೋಧಿಸಿದ್ದರು.