ನೂತನ ಸಚಿವರಿಗೆ ನಾಳೆಯೊಳಗೆ ಖಾತೆ ಹಂಚಿಕೆ ಪೂರ್ಣ

 

ಬೆಂಗಳೂರು, ಜೂ.7-ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲು ಪ್ರಯಾಸ ಪಡುತ್ತಿದ್ದು, ಇಂದು ಸಂಜೆ ಅಥವಾ ನಾಳೆಯೊಳಗೆ ಖಾತೆ ಹಂಚಿಕೆ ಪೂರ್ಣಗೊಳಿಸುವ ಸಾಧ್ಯತೆಗಳಿವೆ.
ನಿನ್ನೆ ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ 25 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಬೆನ್ನಲೇ ಸಚಿವ ಸ್ಥಾನ ವಂಚಿತರಿಂದ ಬಂಡಾಯವನ್ನು ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳು ಎದುರಿಸುವಂತಾಗಿದೆ.

ಒಂದೆಡೆ ಬಂಡಾಯ ಮತ್ತೊಂದೆಡೆ ಖಾತೆ ಹಂಚಿಕೆ ಬಿಕ್ಕಟ್ಟನ್ನು ಬಗೆಹರಿಸಬೇಕಾಗಿದೆ. ಕೆಲವು ಸಚಿವರಂತೂ ನಿರ್ದಿಷ್ಟ ಖಾತೆಗೆ ಪಟ್ಟು ಹಿಡಿದಿರುವುದರಿಂದ ನೂತನ ಸಚಿವರಿಗೆ ಖಾತೆಗಳನ್ನು ಹಂಚುವುದೇ ಮುಖ್ಯಮಂತ್ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಹಿಂದೆ ಒಪ್ಪಂದವಾಗಿರುವಂತೆ ಕಾಂಗ್ರೆಸ್ 22, ಜೆಡಿಎಸ್‍ಗೆ 12 ಖಾತೆಗಳನ್ನು ಬಿಟ್ಟು ಕೊಡಬೇಕಾಗಿದೆ. ನಿನ್ನೆ ಕಾಂಗ್ರೆಸ್‍ನಿಂದ 15, ಜೆಡಿಎಸ್‍ನಿಂದ 10 ಮಂದಿ ಶಾಸಕರು ಸಚಿವರಾಗಿದ್ದಾರೆ.

ಉಭಯ ಪಕ್ಷಗಳಲ್ಲಿ ಹಿರಿಯರು ಮತ್ತು ಕಿರಿಯರನ್ನೊಳಗೊಂಡ ಸಮ್ಮಿಶ್ರ ಸಂಪುಟ ಇರುವ ಕಾರಣ ಹಿರಿತನ, ಪ್ರಾದೇಶಿಕತೆ, ಮುಂಬರುವ 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಯಾರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ಮುಖ್ಯಮಂತ್ರಿ ಹೆಗಲಿಗೆ ಹಣಕಾಸು ಖಾತೆ :

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಹತ್ವದ ಹಣಕಾಸು ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳಲಿದ್ದಾರೆ. ಜೊತೆಗೆ ಗುಪ್ತಚರ ವಿಭಾಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅವರ ಬಳಿಯೇ ಉಳಿಯಲಿದೆ.
ಇನ್ನು ಉಪಮುಖ್ಯಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಗೃಹ ಖಾತೆ ಜೊತೆಗೆ ಬೆಂಗಳೂರು ನಗರಾಭಿವೃದ್ದಿ ಖಾತೆಯೂ ಸಿಗಲಿದೆ. ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ನಂತರ ಉಳಿಯುವ ಇಲಾಖೆಗಳನ್ನು ಹಿರಿಯ ಸಚಿವರಿಗೆ ಹಂಚಿಕೆ ಮಾಡುವ ಸಾಧ್ಯತೆಗಳಿದ್ದು, ಇನ್ನುಳಿದ ಖಾತೆಗಳನ್ನು ಸಿಎಂ ಬಳಿಯೇ ಇಟ್ಟುಕೊಳ್ಳುವ ಸಂಭವವಿದೆ.
2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಚಿವರಿಗೆ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ.
ಖಾತೆ ಹಂಚಿಕೆಯಲ್ಲಿ ಹಗ್ಗ ಜಗ್ಗಾಟ ಉಂಟಾಗಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಜೆ ಅಥವಾ ನಾಳೆಯೊಳಗೆ ಖಾತೆ ಹಂಚಿಕೆ ಮಾಡುವ ನಿರೀಕ್ಷೆಯಿದೆ.
ಸಚಿವರ ಸಂಭವನೀಯ ಖಾತೆಗಳು:
ಆರ್ .ವಿ.ದೇಶಪಾಂಡೆ – ಕಂದಾಯ
ಡಿ.ಕೆ.ಶಿವಕುಮಾರ್ – ಜಲಸಂಪನ್ಮೂಲ
ಕೆ.ಜೆ. ಜಾರ್ಜ್ – ಬೃಹತ್ ಕೈಗಾರಿಕೆ
ಕೃಷ್ಣಬೈರೇಗೌಡ -ಗ್ರಾಮೀಣಾಭಿವೃದ್ಧಿ
ಎನ್.ಎಚ್.ಶಿವಶಂಕರ ರೆಡ್ಡಿ – ಕೃಷಿ
ರಮೇಶ್ ಜಾರಕಿಹೊಳಿ – ಸಮಾಜ ಕಲ್ಯಾಣ
ಪ್ರಿಯಾಂಕ್ ಖರ್ಗೆ – ಐಟಿಬಿಟಿ
ಯು.ಟಿ.ಖಾದರ್ – ನಗರಾಭಿವೃದ್ಧಿ
ಜಮೀರ್ ಅಹ್ಮದ್ – ವಸತಿ, ಅಲ್ಪಸಂಖ್ಯಾತ ಹಾಗೂ ವಕ್ಫ್
ಶಿವಾನಂದ ಪಾಟೀಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟರಮಣಪ್ಪ – ಬಂದರು ಮತ್ತು ಮೀನುಗಾರಿಕೆ
ರಾಜಶೇಖರ್ ಪಾಟೀಲ್- ಅರಣ್ಯ
ಪುಟ್ಟರಂಗಶೆಟ್ಟಿ – ಕಾರ್ಮಿಕ
ಶಂಕರ್ – ಯುವಜನ ಮತ್ತು ಕ್ರೀಡೆ
ಜಯಮಾಲ – ಮಹಿಳಾ ಮತ್ತು ಕಲ್ಯಾಣ
ಎಚ್.ಡಿ.ರೇವಣ್ಣ – ಲೋಕೋಪಯೋಗಿ
ಬಂಡೆಪ್ಪ ಕಾಶೆಂಪುರ – ಪಶು ಸಂಗೋಪನಾ
ಜಿ.ಟಿ.ದೇವೇಗೌಡ – ಸಹಕಾರ
ಎಂ.ಸಿ.ಮನಗೂಳಿ – ಸಣ್ಣ ಕೈಗಾರಿಕೆ
ಎಸ್.ಆರ್.ಶ್ರೀನಿವಾಸ್- ತೋಟಗಾರಿಕೆ
ವೆಂಕಟರಾವ್ ನಾಡಗೌಡ – ಪ್ರವಾಸೆ ೂೀದ್ಯಮ
ಸಿ.ಎಸ್.ಪುಟ್ಟರಾಜು – ಸಾರಿಗೆ
ಸಾ.ರಾ.ಮಹೇಶ್- ಅಬಕಾರಿ
ಎನ್.ಮಹೇಶ್ – ಸಣ್ಣ ನೀರಾವರಿ
ಡಿ.ಸಿ.ತಮ್ಮಣ್ಣ – ಉನ್ನತ ಶಿಕ್ಷಣ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ