ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸವಾಲು

 

ಬೆಂಗಳೂರು, ಜೂ.7-ಬಾಗಲಕೋಟೆ ಜಿಲ್ಲೆ ಇಳಕಲ್‍ಗೆ ಹೆಲಿಕಾಪ್ಟರ್‍ನಲ್ಲಿ ಹೋಗಿದ್ದ ಪ್ರವಾಸದ ವೆಚ್ಚವನ್ನು ಭರಿಸಲು ನಾನು ಸಿದ್ಧನಿದ್ದೇನೆ. ನೀವು ಜನತೆಗೆ ನೀಡಿದ ವಾಗ್ದಾನದಂತೆ ರೈತರ ಸಾಲ ಮನ್ನಾ ಮಾಡಿ ರಾಜಕೀಯ ನೈಪುಣ್ಯತೆ ಪ್ರದರ್ಶಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಈ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ಅವರು ಕಳೆದ 21ರಂದು ಬಾಗಲಕೋಟೆ ಜಿಲ್ಲೆ ಇಳಕಲ್‍ನ ಡಾ.ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದರಿಂದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‍ನಲ್ಲಿ ಹೋಗಿದ್ದೆ.

ನಾನು ಹೆಲಿಕಾಪ್ಟರ್‍ನಲ್ಲಿ ಹೋಗಿದ್ದರಿಂದ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಿದೆ ಎಂದು ನೀವು ಹೇಳುತ್ತಿದ್ದೀರಿ. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರುಗಳು ಸ್ಥಳಗಳಿಗೆ ಹೋಗಬೇಕೆಂದು ಮನವಿ ಮಾಡಿದ್ದರಿಂದ ತೆರಳಿದ್ದೇನೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ನೀವು ನಾನು ಹೆಲಿಕಾಪ್ಟರ್‍ನಲ್ಲಿ ಹೋಗಿದ್ದೆ ಪ್ರಮಾದ ಎಂಬ ರೀತಿಯಲ್ಲಿ ಮಾತನಾಡಿದ್ದೀರಿ. ಇದು ನನಗೆ ಅತ್ಯಂತ ನೋವು ತಂದಿದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಪರಮ ಪೂಜ್ಯ ಶ್ರೀಗಳ ಅಂತ್ಯ ಸಂಸ್ಕಾರ ಹಾಗೂ ಅಂದು ರೈತರ ಮನೆಗೆ ಹೋಗಿ ಸಾಂತ್ವಾನ ಹೇಳಿದ್ದೇ ತಪ್ಪು ಎನ್ನುವುದಾದರೆ ನನ್ನ ಅಭ್ಯಂತರವಿಲ್ಲ. ಧರ್ಮಗುರುಗಳು ಮತ್ತು ರೈತನ ಮನೆಗೆ ಸಾಂತ್ವಾನ ಹೇಳಿದ್ದನ್ನೇ ದುಂದುವೆಚ್ಚ ಎನ್ನುವುದು ಸರಿಯೇ ಎಂದು ಬಿಎಸ್‍ವೈ ಪ್ರಶ್ನಿಸಿದ್ದಾರೆ.
ನಾನು ನನ್ನ ಪ್ರವಾಸದ ವೆಚ್ಚವನ್ನು ಭರಿಸಲು ಸಿದ್ದನಾಗಿದ್ದೇನೆ. ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ನಿಮಗೆ ಸ್ವಾಮೀಜಿಗಳ ಬಗ್ಗೆ ಗೌರವ ಇಲ್ಲದಿರಬಹುದು. ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿಗೇರಿ ಸ್ವಾಮಿಗಳ ಬಗ್ಗೆ ಅಗೌರವ ತೋರುವ ರೀತಿಯಲ್ಲಿ ಮಾತನಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವಾರಗಳಿಂದ ಸಚಿವ ಸಂಪುಟ ರಚನೆಗಾಗಿ ನಡೆಯುತ್ತಿರುವ ಬೆಳವಣಿಗೆಗಳು, ರಾಜಕೀಯ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗ-ಜಗ್ಗಾಟದಿಂದ ಆಡಳಿತ ಯಂತ್ರ ನಿಂತುಹೋಗಿದೆ.
ನಿಮ್ಮ ವೈಯಕ್ತಿಕ ಹೆಚ್ಚುಗಾರಿಕೆಯನ್ನು ಹೆಚ್ಚಿಸಿಕೊಳ್ಳಲು ಕುಚೋದ್ಯ ಇಲ್ಲವೆ ದುರಾಹಂಕಾರದ ಹೇಳಿಕೆಗಳನ್ನು ನಿಲ್ಲಿಸಬೇಕು. ಮೊದಲು ರೈತರ ಸಾಲ ಮನ್ನಾ ಮಾಡಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಯಡಿಯೂರಪ್ಪ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ