
ಬೆಂಗಳೂರು,ಜೂ.7- ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ನಗರದಲ್ಲಿ ಇನ್ನೂ ಹೆಚ್ಚು ಅಪ್ಪಾಜಿ ಕ್ಯಾಂಟೀನ್ ಆರಂಭಿಸುವಂತೆ ಜೆಡಿಎಸ್ ಒತ್ತಾಯಿಸಿದೆ.
ನಗರದಲ್ಲಿ ಈಗ ಎರಡು ಕಡೆ ಮಾತ್ರ ಅಪ್ಪಾಜಿ ಕ್ಯಾಂಟೀನ್‍ಗಳಿವೆ. ಇವುಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಹಾಗಾಗಿ ನಗರದ ಇತರೆಡೆಯೂ ಅಪ್ಪಾಜಿ ಕ್ಯಾಂಟೀನ್ ಆರಂಭಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಬಿಎಂಪಿಯ ಜೆಡಿಎಸ್ ಗುಂಪಿನ ನಾಯಕಿ ನೇತ್ರ ನಾರಾಯಣ್ ತಿಳಿಸಿದ್ದಾರೆ.
ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 198 ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಬಾರಿ ಜೆಡಿಎಸ್ , ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಬಡವರು ಹೆಚ್ಚು ಇರುವ ಪ್ರದೇಶಗಳನ್ನು ಗುರುತಿಸಿ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಅಭ್ಯಂತರವಿಲ್ಲ:
ನಗರದಲ್ಲಿ ಜನಮನ್ನಣೆ ಗಳಿಸಿರುವ ಇಂದಿರಾ ಕ್ಯಾಂಟೀನ್‍ಗಳಿಗೆ ಯಾವುದೇ ತೊಂದರೆಯಾಗದಂತೆ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲು ನಮ್ಮ ಅಭ್ಯಂತರವಿಲ್ಲ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಅಸ್ತಿತ್ವದಲ್ಲಿವೆ. ಅದೇ ರೀತಿ ಬಿಬಿಎಂಪಿಯಲ್ಲೂ ಮೈತ್ರಿ ಇದೆ. ಜೆಡಿಎಸ್ ತೀರ್ಮಾನ ಸೂಕ್ತವಾಗಿದೆ. ಆದರೆ ಇಂದಿರಾ ಕ್ಯಾಂಟೀನ್ ಉತ್ತಮವಾಗಿ ನಡೆಯುತ್ತಿವೆ. ಜನರ ಹೊಟ್ಟೆ ತುಂಬಿಸುತ್ತಿವೆ.ಇಂದಿರಾ ಕ್ಯಾಂಟೀನ್‍ಗೆ ತೊಂದರೆಯಾಗಬಾರದು. ಆದ್ದರಿಂದ ಎಲ್ಲಿ ಅವಶ್ಯಕತೆ ಇರುವುದೋ ಹಾಗೂ ಇಂದಿರಾ ಕ್ಯಾಂಟೀನ್ ಎಲ್ಲಿ ಇಲ್ಲವೋ ಅಂತಹ ಕಡೆ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಬಹುದು ಎಂದು ಹೇಳಿದರು.
ಮೈತ್ರಿ ಸರ್ಕಾರ ಸುಗಮವಾಗಿ ಕಾರ್ಯ ನಿರ್ವಹಿಸಬೇಕಿದೆ. ಅದಕ್ಕಾಗಿ ಸಲಹಾ ಸಮಿತಿಯು ರಚನೆಯಾಗಿದೆ. ಆದ್ದರಿಂದ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.