ಬೆಂಗಳೂರು:ಜೂ-7: ಪತ್ನಿ ಡೆಬಿಡ್ ಕಾರ್ಡ್ ನ್ನು ಪತಿಯಾಗಲಿ, ಸಂಬಂಧಿಕರಾಗಲಿ ಯಾರೇ ಕೂಡ ಬಳಸುವಂತಿಲ್ಲ. ಹಾಗೊಂದುವೇಳೆ ಬಳಸಿದರೆ ಅದಕ್ಕೆ ಭಾರೀ ದಂಡ ತೆರಬೇಕಾಗುತ್ತದೆ ಅಂತಹುದೊಂದು ವಾದವನ್ನು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮಂಡಿಸಿದ್ದು, ಇದಕ್ಕೆ ಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂತಹ ಅಭಿಪ್ರಾಯಪಟ್ಟಿದ್ದು, ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ನಿಯಮಗಳ ಅನ್ವಯ ಪತಿ, ಪತ್ನಿ, ಸ್ನೇಹಿತ, ಸಂಬಂಧಿ ಇನ್ಯಾರೇ ಆಗಿರಲಿ ಒಬ್ಬರ ಎಟಿಎಂ ಕಾರ್ಡ್ ಅನ್ನು ಮತ್ತೊಬ್ಬರು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಅಥವಾ ಕಾರ್ಡ್ ಮಾಲೀಕನ ಒಪ್ಪಿಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ಹಣ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಕಾರಣರಾಗುತ್ತಾರೆ ಎಂದು ಕೋರ್ಟ್ ಹೇಳಿದೆ.
2013ರಲ್ಲಿ ಮಾರತ್ ಹಳ್ಳಿ ನಿವಾಸಿ ವಂದನಾ ಅವರು ಹೆರಿಗೆ ರಜೆಯಲ್ಲಿದ್ದಾಗ ಡೆಬಿಟ್ ಕಾರ್ಡ್ ಅನ್ನು ಪತಿಗೆ ನೀಡಿದ್ದರು. ಪತಿ 25 ಸಾವಿರ ರೂ. ಡ್ರಾ ಮಾಡಲು ಎಸ್ಬಿಐ ಎಟಿಎಂಗೆ ಹೋಗಿ ಸ್ವೈಪ್ ಮಾಡಿದಾಗ ಡೆಬಿಟ್ ಆಗಿದೆ ಎಂಬ ರಶೀದಿ ಮಾತ್ರ ಬಂದಿತ್ತು, ಹಣ ಬಂದಿರಲಿಲ್ಲ.
ಆಗ ವಂದನಾ ಅವರ ಪತಿ ರಾಜೇಶ್ ಬ್ಯಾಂಕ್ಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಬ್ಯಾಂಕ್ನವರು ಎಟಿಎಂ ಸಮಸ್ಯೆಯಿದ್ದು, 24 ಗಂಟೆಯೊಳಗೆ ಹಣ ಮರು ಪಾವತಿ ಮಾಡುವುದಾಗಿ ಹೇಳಿದ್ದರು. ಆದರೆ ಹಣ ಪಾವತಿಸದ ಬ್ಯಾಂಕ್ನವರಲ್ಲಿ ಮತ್ತೆ ವಿಚಾರಿಸಿದಾಗ ವಹಿವಾಟು ಸರಿಯಾಗಿದೆ. ಹಣ ಡೆಬಿಟ್ ಆಗಿದೆ ಎಂದು ಹೇಳಿತ್ತು.
ಎಟಿಎಂ ಕೇಂದ್ರದ ಸಿಸಿಟಿವಿ ರೆಕಾರ್ಡ್ ಪಡೆದು ಪರಿಶೀಲಿಸಿದಾಗ ಅದರಲ್ಲಿ ರಾಜೇಶ್ಗೆ ಹಣ ಯಂತ್ರದಿಂದ ಬಂದಿಲ್ಲ ಎಂಬುದು ಖಚಿತವಾಗಿ ಮತ್ತೆ ಬ್ಯಾಂಕ್ಗೆ ದೂರು ನೀಡಿದ್ದರು. ಆದರೆ ಬ್ಯಾಂಕ್ನವರು ಸಿಸಿಟಿವಿ ರೆಕಾರ್ಡ್ ಪರಿಶೀಲಿಸಿ, ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಬಳಸಿರುವುದು ಖಾತೆದಾರರಾದ ವಂದನಾ ಅಲ್ಲ ಎಂದು ಹೇಳಿತು.
ಆರ್ಟಿಐ ಮೂಲಕ ಹೋರಾಟ ಮುಂದುವರಿಸಿದ ವಂದನಾ, ರಾಜೇಶ್ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದ ದಿನ 2013ರ ನವೆಂಬರ್ 16ರಂದು ಆ ಎಟಿಎಂನಲ್ಲಿ ಹೆಚ್ಚುವರಿಯಾಗಿ 25 ಸಾವಿರ ರೂ. ಉಳಿಕೆ ಇತ್ತು ಎಂಬುದನ್ನು ತಿಳಿದುಕೊಂಡು ಬೆಂಗಳೂರು ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ವೇದಿಕೆಯ ಮೊರೆ ಹೋಗಿದ್ದರು. ಆದರೆ ಮೂರುವರೆ ವರ್ಷಗಳ ಕಾನೂನು ಹೋರಾಟದಲ್ಲಿ ಎಸ್ಬಿಐ ಪರ ವಕೀಲರು 25 ಸಾವಿರ ರೂ. ಉಳಿಕೆ ಇರಲಿಲ್ಲ ಎಂದು ವರದಿ ಸಲ್ಲಿಸಿದರು. ವಂದನಾ ಅವರ ಖಾತೆಯಿಂದ 25 ಸಾವಿರ ರೂ. ಡೆಬಿಟ್ ಆಗಿದೆ ಎಂದು ದಾಖಲೆ ಸಹಿತ ವಾದ ಮುಂದಿಟ್ಟರು.
ಪರಿಶೀಲಿಸಿದ ಕೋರ್ಟ್, ವಂದನಾ ಅವರು ಪತಿಗೆ ಚೆಕ್ ಇಲ್ಲೊವೇ ಅಧಿಕೃತ ಪತ್ರ ನೀಡಿಹಣ ಡ್ರಾ ಮಾಡಿಸಿಕೊಳ್ಳಬಹುದು. ಆದರೆ ಪಿನ್ ನೀಡಿ ಅವರ ಕೈನಿಂದ ಹಣ ಡ್ರಾ ಮಾಡಿಸಿಕೊಳ್ಳುವಂತಿಲ್ಲ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದೆ.
ಸಿಸಿಟಿವಿ ದಾಖಲೆ ಮತ್ತು ಎಟಿಎಂನಲ್ಲಿ ಹೆಚ್ಚುವರಿ 25 ಸಾವಿರ ರೂ. ಇತ್ತು ಎಂಬ ದಾಖಲೆಯನ್ನು ಸಲ್ಲಿಸಿದರೂ ವಂದನಾ ಅವರು ಡೆಬಿಟ್ ಕಾರ್ಡ್ ಅನ್ನು ಪತಿಗೆ ನೀಡಿದ್ದ ಒಂದೇ ಕಾರಣಕ್ಕೆ ಸಾಕಷ್ಟು ನಷ್ಟ ಅನುಭವಿಸುವಂತಾಯಿತು.