ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ: ನಿರೀಕ್ಷಿತ ಸಾಧನೆ ಮಾಡದೇ ಇರುವವರ ಬದಲಾವಣೆ

 

ಬೆಂಗಳೂರು, ಜೂ.7- ಇನ್ಮುಂದೆ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ನಡೆದು ನಿರೀಕ್ಷಿತ ಸಾಧನೆ ಮಾಡದೇ ಇರುವವರನ್ನು ಬದಲಾವಣೆ ಮಾಡಲಾಗುತ್ತದೆ. ಜತೆಗೆ ಎರಡು ವರ್ಷಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು. ಆ ವೇಳೆ ವಂಚಿತರಿಗೆ ಅವಕಾಶ ಸಿಗಲಿದೆ. ಹೀಗಾಗಿ ಯಾರೂ ಅಸಮಾಧಾನಗೊಳ್ಳದೆ ತಾಳ್ಮೆಯಿಂದ ಇರುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೃಮಾರ ಕೃಪಾದ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದೇ ಇರುವ ಅತೃಪ್ತತರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನವೊಲಿಸಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆ ವೇಳೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್,ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ನಾನು ಭಾಗವಹಿಸಿದ್ದ ಪ್ರಮುಖ ಸಭೆಯಲ್ಲಿ ಯಾರನ್ನು ಸಚಿವರಾಗಿ ಮಾಡಬೇಕು ಎಂಬ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಅದೇ ವೇಳೆ ಯಾರಿಗೆ ಯಾವ ಖಾತೆ ಎಂಬುದನ್ನೂ ನಿರ್ಧಾರ ಮಾಡಲಾಗಿದೆ. ಈ ಪಟ್ಟಿಯನ್ನು ಈಗಾಗಲೇ ಮುಖ್ಯಮಂತ್ರಿಯವರಿಗೆ ಕಳುಹಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ವೇಳೆಗೆ ಖಾತೆ ಹಂಚಿಕೆಯ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ಹೇಳಿದರು.

ಅದೇ ಸಭೆಯಲ್ಲಿ ಹೈಕಮಾಂಡ್ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿದೆ. ಮೊದಲನೆ ಷರತ್ತಿನಲ್ಲಿ ಕಾಂಗ್ರೆಸ್ ಪಾಲಿಗೆ ಬಂದ 22 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಬೇಕು ಮತ್ತು ಶೀಘ್ರವೇ ಅದಕ್ಕೆ ನೇಮಕಾತಿ ಮಾಡಿ ಸಂಪುಟ ವಿಸ್ತರಣೆ ಮಾಡಬೇಕು. ಎರಡನೇ ಪ್ರಮುಖ ಷರತ್ತು ಎಂದರೆ ಪ್ರತಿ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ನಡೆಸಿದೆ. ನಿರೀಕ್ಷಿತ ಸಾಧನೆ ಮಾಡದ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದರು.

ನಮಗೆ 22 ಸ್ಥಾನಗಳು ಮಾತ್ರ ಇರುವುದರಿಂದ ಬಹಳಷ್ಟು ಜಿಲ್ಲೆಗಳಲ್ಲಿ ಸಚಿವರನ್ನು ನೇಮಿಸಲಾಗಿಲ್ಲ. ಕೊಡಗು, ಹಾಸನ, ಮಂಡ್ಯ, ಉಡುಪಿಯಂಥ ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದೇ ಇಲ್ಲ. ಅಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಚಿವರ ನೇಮಕಾತಿ ಬಗ್ಗೆ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಕುರಿತು ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮೊದಲ ಬಾರಿ ಶಾಸಕರಾದವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದು ಎಂದು ಹೈಕಮಾಂಡ್ ಮಾರ್ಗಸೂಚಿ ರೂಪಿಸಿದ್ದರಿಂದ 15 ಮಂದಿ ಆಕಾಂಕ್ಷಿಗಳಿಗೆ ಅವಕಾಶ ತಪ್ಪಿ ಹೋಗಿದೆ.

ರಾಣಿಬೆನ್ನೂರಿನ ಶಾಸಕ ಆರ್.ಶಂಕರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೇ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಹೀಗಾಗಿ ಅವರೊಬ್ಬರನ್ನು ಹೊರತುಪಡಿಸಿ ಉಳಿದಂತೆ ಮೊದಲ ಬಾರಿಗೆ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಹೇಳಿದರು.
ಸಂಪುಟ ವಿಸ್ತರಣೆಯಲ್ಲಿ ನಾನು ದ್ವೇಷದ ರಾಜಕಾರಣ ಮಾಡಿದ್ದೇನೆ ಎಂದು ವರದಿಯಾಗಿದೆ. ಇದು ಆಧಾರ ರಹಿತ. ನಾನು ಎಂದಿಗೂ ದ್ವೇಷದ ರಾಜಕಾರಣ ಮಾಡಿದವನಲ್ಲ. ಅದು ನನ್ನ ಸ್ವಭಾವಕ್ಕೆ ಹೊಂದುವುದೂ ಇಲ್ಲ. ಸಚಿವ ಸಂಪುಟ ವಿಸ್ತರಣೆ ನನ್ನೊಬ್ಬನಿಂದ ಆಗಿದ್ದಲ್ಲ. ಎಲ್ಲರೂ ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಹೈಕಮಾಂಡ್ ಪ್ರಮುಖ ಸಭೆ ನಡೆಸುವ ಮುನ್ನ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ, ಡಿ.ಕೆ.ಶಿವಕುಮಾರ್ ಅವರ ಜತೆ ಪ್ರತ್ಯೇಕ ಮಾತುಕತೆ ನಡೆಸಿತ್ತು. ಎಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ನನ್ನ ವೈಯಕ್ತಿಕ ಪಾತ್ರ ಏನೂ ಇಲ್ಲ. ನಾನು ಯಾರ ವಿರುದ್ಧವೂ ದ್ವೇಷದ, ಸೇಡಿನ ರಾಜಕಾರಣ ಮಾಡಿಲ್ಲ ಎಂದು ನೊಂದು ಹೇಳಿದರು.
ನಿಗಮ ಮಂಡಳಿಗಳ ನೇಮಕಾತಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಮೂರನೇ ಎರಡಷ್ಟು ಕಾಂಗ್ರೆಸ್‍ಗೆ, ಮೂರನೇ ಒಂದಷ್ಟು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ. ಕಾಂಗ್ರೆಸ್‍ಗೆ ಬಂದ ನಿಗಮ ಮಂಡಳಿಗಳ ಪೈಕಿ ಶೇ.50ರಷ್ಟು ಶಾಸಕರನ್ನು, ಉಳಿದ ಶೇ.50ರಷ್ಟು ಕಾರ್ಯಕರ್ತರನ್ನು ನೇಮಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಿರ್ಧರಿಸಿದೆ. ಶೀಘ್ರವೇ ನೇಮಿಸಲಿದೆ. ಯಾರನ್ನು ನೇಮಿಸಲಿದೆ ಎಂಬುದು ನನಗೆ ಗೊತ್ತಿಲ್ಲ. ಖಾತೆ ಹಂಚಿಕೆಯಲ್ಲಿ ಅತೃಪ್ತರಾಗಿರುವ ಎಂ.ಬಿ.ಪಾಟೀಲ್ ಸೇರಿದಂತೆ ಬಹಳಷ್ಟು ಹಿರಿಯರನ್ನು ನಾನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸುತ್ತೇನೆ. ಬಹುಶಃ ನನ್ನ ವಿವರಣೆಯ ನಂತರ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಶಾಸಕರು ಸಚಿವರಾಗಬೇಕು ಎಂಬುದು ಕ್ಷೇತ್ರ ಜನರ ಅಭಿಲಾಷೆ. ಅದು ಈಡೇರದೇ ಇದ್ದಾಗ ನಿರಾಶೆ ಸಹಜ. ಪ್ರತಿಭಟನೆ ನಡೆಯುತ್ತವೆ. ಕಾವು ಕಡಿಮೆಯಾದ ಮೇಲೆ ಅಸಮಾಧಾನಗೊಂಡವರನ್ನು ಸಮಾಧಾನಗೊಳಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಗಾಳಕ್ಕೆ ನಮ್ಮವರು ಸಿಗಲ್ಲ:
ಕಾಂಗ್ರೆಸ್‍ನಲ್ಲಿ ಅತೃಪ್ತಿಗೊಂಡವರನ್ನು ಸಂಪರ್ಕಿಸಿ ಸೆಳೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಹಿತಿ ಇದೆ. ನಮ್ಮ ಯಾವ ಶಾಸಕರೂ ಬಿಜೆಪಿಯ ಗಾಳಕ್ಕೆ ಸಿಕ್ಕುವುದಿಲ್ಲ. ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಫ್ರೆಂಚ್‍ನ ರಾಯಭಾರಿಗಳು ಇಂದು ತಮ್ಮನ್ನು ಭೇಟಿ ಮಾಡಿ ಬೆಂಗಳೂರಿನ ಅಭಿವೃದ್ದಿಗೆ ಸಂಬಂಧಪಟ್ಟಂತೆ ಚರ್ಚೆ ಮಾಡಿದ್ದೇನೆ. ನಗರದಲ್ಲಿ ಸುಮಾರು ಒಂದೂವರೆ ಸಾವಿರ ನಾಗರಿಕರಿದ್ದು, 150ಕ್ಕೂಹೆಚ್ಚು ಕಂಪೆನಿಗಳು ಕೆಲಸ ಮಾಡುತ್ತಿವೆ. ಅದೇ ರೀತಿ ಬಿಬಿಎಂಪಿಯ ತಜ್ಞರ ಸಮಿತಿ ಮುಖ್ಯಸ್ಥರಾದ ಬಿ.ಎಸ್.ಪಾಟೀಲ್ ಮತ್ತು ಸಿದ್ದಯ್ಯ ಅವರು ಇಂದು ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಮುಂದೆ ಅವರೊಂದಿಗೆ ಸುದೀರ್ಘ ಚರ್ಚೆಮಾಡುವ ಭರವಸೆ ನೀಡಿದ್ದೇನೆ ಎಂದರು.

ವಿಧಾನಪರಿಷತ್‍ಗೆ ಸಚಿವೆ ಜಯಮಾಲಾ ಅವರೇ ಸಭಾನಾಯಕಿಯಾಗಿ ಕೆಲಸ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪರಿಷತ್‍ನಿಂದ ಜಯಮಾಲಾ ಮಾತ್ರ ಸಚಿವರಾಗಿದ್ದಾರೆ. ಜೆಡಿಎಸ್‍ನ ಯಾವ ಸದಸ್ಯರೂ ಕೂಡ ಸಚಿವರಾಗಿಲ್ಲ. ಹೀಗಾಗಿ ಜಯಮಾಲಾ ಅವರೇ ಸಭಾನಾಯಕಿಯಾಗಿ ಕೆಲಸ ಮಾಡುತ್ತಾರೆ. ಅವರು ನಾಲ್ಕು ವರ್ಷ ವಿಧಾನಪರಿಷತ್ ಸದಸ್ಯರಾಗಿ ಹಲವಾರು ಚರ್ಚೆಯಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ