
ನವದೆಹಲಿ, ಮೇ 31-ಕಳೆದ 16 ದಿನಗಳಿಂದ (ಮೇ 14ರಿಂದ) ಏರುಮುಖದಲ್ಲೇ ಸಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಾಗಲೋಟಕ್ಕೆ ಎರಡನೇ ದಿನವೂ ಬೇಕ್ ಬಿದ್ದಿದೆ. ಆದರೆ ಹೆಚ್ಚಿನ ದರ ಏರಿಕೆ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ತೈಲ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಕ್ರಮವಾಗಿ 7 ಮತ್ತು 5 ಪೈಸೆಗಳಷ್ಟು ಇಳಿಸಿದೆ.
ನಿನ್ನೆ ಇಂಧನ ದರಗಳ ಮೇಲೆ ಕೇವಲ 1 ಪೈಸೆಯಷ್ಟು ದರ ಕಡಿತ ಮಾಡಿದ್ದರಿಂದ ಗ್ರಾಹಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಎರಡನೇ ದಿನವೂ ಅತ್ಯಲ್ಪ ಇಳಿಕೆಯಾಗಿದೆ.
ದೆಹಲಿಯಲ್ಲಿ ಈಗ ಪೆಟ್ರೋಲ್ ದರ ಲೀಟರ್ಗೆ 78.35 ರೂಗಳು. ನಿನ್ನೆ ಈ ದರ 78.42 ರೂ.ಗಳಿಷ್ಟಿತ್ತು. ಡೀಸೆಲ್ ಬೆಲೆ 69.25 ರೂ.ಗಳಿಗೆ ಇಳಿದಿದೆ (ನಿನ್ನೆ ದರ 69.30 ರೂ.ಗಳು).
ಸತತ ಎರಡನೇ ದಿನ ಇಂಧನ ದರ ಕಡಿಮೆಯಾಗಿದ್ದರೂ, ಅತ್ಯಲ್ಪ ಇಳಿಕೆಯಿಂದಾಗಿ ಬಳಕೆದಾರರಿಗೆ ಸಮಾಧಾನವಾಗಿಲ್ಲ. ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅನುಕ್ರಮವಾಗಿ ಪ್ರತಿ ಲೀಟರ್ಗೆ 78.43 ರೂ.ಗಳು ಹಾಗೂ 69.31 ರೂ.ಗಳ ಸಾರ್ವಕಾಲಿಕ ದಾಖಲೆ ಏರಿಕೆ ಕಂಡಿತ್ತು. ದೇಶಾದ್ಯಂತ ಇಂಧನ ಬೆಲೆ ನಿರಂತರ ಏರಿಕೆಯಿಂದ ಜನಸಾಮಾನ್ಯರು ಮತ್ತು ಪ್ರತಿಪಕ್ಷಗಳ ಹಿಡಿಶಾಪದ ನಂತರ ನಿನ್ನೆ ಗೊಂದಲಗಳ ಹೇಳಿಕೆ ನಡುವೆ ಕೊನೆಗೆ 1 ಪೈಸೆಯಷ್ಟು ಕಡಿಮೆ ಮಾಡಲಾಗಿತ್ತು.