ನೈರುತ್ಯ ಮುಂಗಾರು ಮಳೆ ರಾಜ್ಯ ಪ್ರವೇಶ

 

ಬೆಂಗಳೂರು, ಮೇ 31- ನೈರುತ್ಯ ಮುಂಗಾರು ಮಳೆ ನಿನ್ನೆಯೇ ರಾಜ್ಯ ಪ್ರವೇಶ ಮಾಡಿದ್ದು, ಇಂದು ದಕ್ಷಿಣ ಒಳನಾಡಿನಾದ್ಯಂತ ವ್ಯಾಪಿಸಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಮಲೆನಾಡಿನ ಕೆಲವು ಭಾಗ, ಮೈಸೂರು, ಚಾಮರಾಜನಗರ, ಮಂಡ್ಯದವರೆಗೂ ಮುಂಗಾರು ವ್ಯಾಪಿಸಿದೆ.

ಇಂದು ಸಂಜೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮುಂಗಾರು ಪ್ರವೇಶ ಮಾಡಲಿದೆ. ಆನಂತರ ಉತ್ತರ ಒಳನಾಡಿಗೂ ವ್ಯಾಪಿಸುವ ಸಾಧ್ಯತೆಗಳಿವೆ. ನಿರೀಕ್ಷೆಯಂತೆ ಸಕಾಲದಲ್ಲೇ ಮುಂಗಾರು ಆಗಮನವಾಗಿದೆ. ಈ ಬಾರಿಯ ಮುಂಗಾರು ಮಳೆ ನಿರಂತರವಾಗಿ ಮುಂದುವರೆಯುವ ಮುನ್ಸೂಚನೆಗಳು ಕಂಡು ಬಂದಿವೆ ಎಂದು ಹೇಳಿದರು.

ನಿನ್ನೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಿದ್ದರೂ ಇದು ಮುಂಗಾರು ಮಳೆಯೇ ಎಂಬುದು ದೃಢಪಡಿಸಿಲ್ಲ ಎಂದು ಶ್ರೀನಿವಾಸ್‍ರೆಡ್ಡಿ ತಿಳಿಸಿದರು.
ಹವಾ ಮುನ್ಸೂಚನೆ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡಕವಿದ ವಾತಾವರಣ ಮುಂದುವರೆದಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ