
ಬೆಂಗಳೂರು, ಮೇ 31- ಅಮೆರಿಕದ ರಾಯಭಾರಿ ಎಚ್.ಇ.ಕೆನೆತ್ ಐ. ಜೆಸ್ಟರ್, ರಾಬರ್ಟ್ ಜಿ.ಬರ್ಜಸ್ ಒಳಗೊಂಡ ಕಾನ್ಸಲೇಟ್ ಜನರಲ್ ನಿಯೋಗ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸಲೇಟ್ ಜನರಲ್ ಕಚೇರಿ ಆರಂಭಿಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ತಾತ್ಕಾಲಿಕವಾಗಿ ಕಚೇರಿ ಆರಂಭಿಸಲು ಸ್ಥಳ ಸೇರಿದಂತೆ ಏನೇನು ಸೌಲಭ್ಯದ ಅವಶ್ಯಕತೆಯಿದೆಯೋ ಅವೆಲ್ಲವನ್ನೂ ಒದಗಿಸುವ ಭರವಸೆ ನೀಡಿದರು.
ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಎರಡು ಉಭಯ ರಾಷ್ಟ್ರಗಳ ನಡುವೆ ವಿದ್ಯಾಭ್ಯಾಸ, ಉದ್ಯೋಗ, ಇನ್ನಿತರ ಸಂಪರ್ಕಕ್ಕಾಗಿ ಕಾನ್ಸಲೇಟ್ ಜನರಲ್ ಕಚೇರಿ ಅತ್ಯಾವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಆರಂಭಿಸಲು ಅನುಕೂಲ ಮಾಡಿಕೊಡುವಂತೆ ಕೋರಲಾಯಿತು.
ಅಮೆರಿಕ ಮೂಲದ 370 ಕಂಪೆನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕಂಪೆನಿಗಳ ಹಿತಾಸಕ್ತಿ ಕಾಪಾಡುವುದು ಸೇರಿದಂತೆ ಭಾರತೀಯ ಆರ್ಥಿಕ ವ್ಯವಸ್ಥೆಗೆ ಕೊಡುಗೆ ನೀಡುತ್ತಿರುವ ಈ ಕಂಪೆನಿಗಳಿಗೆ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಯಿತು.
ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ್‍ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.