ಬಿಜೆಪಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಐಟಿ, ಇಡಿ, ಸಿಬಿಐ ಸಂಸ್ಥೆಗಳ ಮೂಲಕ ಬೆದರಿಸುವ ಕೆಲಸ ಮಾಡುತ್ತಿದೆ: ಕಾಂಗ್ರೆಸ್

 

ಬೆಂಗಳೂರು, ಮೇ 31-ಮೊದಲಿನಿಂದಲೂ ಬಿಜೆಪಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಐಟಿ, ಇಡಿ, ಸಿಬಿಐ ಸಂಸ್ಥೆಗಳ ಮೂಲಕ ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಸೋದರರ ವಿರುದ್ಧ ಸರ್ಚ್ ವಾರೆಂಟ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಸಂಸದರಾದ ಮುದ್ದಹನುಮೇಗೌಡ, ಚಂದ್ರಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಒಂದಲ್ಲ ಒಂದು ರೀತಿಯಲ್ಲಿ ಡಿಕೆಶಿ ಮೇಲೆ ಕೇಂದ್ರದಿಂದ ದಾಳಿಯಾಗುತ್ತಲೇ ಇದೆ. ಕಾಂಗ್ರೆಸ್‍ಗೆ ಶಕ್ತಿಯಾಗಿರೋದು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್. ಇವರಿಬ್ಬರನ್ನು ಮಣಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. 11 ಜನರ ಮೇಲೆ ಸಿಬಿಐ ಸರ್ಚ್ ವಾರೆಂಟ್ ತಂದು ಇವರನ್ನು ಮಣಿಸುವ ಕೆಲಸ ಮಾಡುತ್ತಿದೆ. ಇದೇ ರೀತಿ ತೃಣಮೂಲ ಕಾಂಗ್ರೆಸ್‍ನ ಸುದೀಪ್ ಬಂಡೋಪಾಧ್ಯಾಯ ಮೇಲೆ ಕೇಂದ್ರ ಸರ್ಕಾರ ಸಿಬಿಐ ಅಸ್ತ್ರ ಪ್ರಯೋಗಿಸಿ ಮೂರು ತಿಂಗಳು ಕಿರುಕುಳ ನೀಡಿತ್ತು.

ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಪ್ರಬಲರಾಗಿದ್ದಾರೆ. ಕೇಂದ್ರದ ಯಾವುದೇ ದಾಳಿಯನ್ನು ಎದುರಿಸುವ ಸಾಮಥ್ರ್ಯ ಅವರಿಗಿದೆ. ಅವರು ಯಾವುದೇ ಕಾನೂನು ವಿರೋಧಿ ಕೆಲಸ ಮಾಡಿಲ್ಲ ಎಂದು ಹನುಮೇಗೌಡ ಹೇಳಿದರು.
ಸಂಸದ ಚಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕೆಲಸ ಕೊಟ್ಟರೂ ಡಿಕೆಶಿ ಸಹೋದರರು ಸಮರ್ಥವಾಗಿ ನಿಭಾಯಿಸುತ್ತಾರೆ. ಇದನ್ನು ಸಹಿಸದ ಬಿಜೆಪಿ ಅವರನ್ನು ಹಣಿಯಲು ತಂತ್ರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಗುರಿಯಾಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈ ದಾಳಿ ನಡೆಸುತ್ತಿದ್ದಾರೆ. ಇವರ ಈ ದಾಳಿಗೆ ನಾವು ಹೆದರುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷವೇ ಅವರ ಪರವಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ