ನವದೆಹಲಿ, ಮೇ. 28-ರಾಜಕೀಯವಾಗಿ ನಿರ್ಣಯಕವಾಗಿರುವ ಉತ್ತರ ಪ್ರದೇಶದ ಕೈರಾನ ಸೇರಿದಂತೆ 11 ರಾಜ್ಯಗಳ ನಾಲ್ಕು ಲೋಕಸಭೆ ಮತ್ತು 11 ವಿಧಾನಸಭೆಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.
ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಬಿಹಾರ, ಜಾರ್ಖಂಡ್, ನಾಗಾಲ್ಯಾಂಡ್, ಮೇಘಾಲಯ, ಕರ್ನಾಟಕ, ಕೇರಳ, ಉತ್ತರಖಂಡ, ಮತ್ತು ಪಂಜಾಬ್ ಈ 10 ರಾಜ್ಯಗಳಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ.
ಉತ್ತರ ಪ್ರದೇಶ : ಉತ್ತರ ಪ್ರದೇಶದ ಗೋರಖ್‍ಪುರ್ ಮತ್ತು ಫೂಲ್‍ಪುರ್ ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಬಿಜೆಪಿಗೆ ಕೈರಾನ ಲೋಕಸಭೆ ಚುನಾವಣಾ ಫಲಿತಾಂಶದಿಂದ ಮತ್ತೆ ಮುಖಭಂಗವಾಗಿದೆ. ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ(ಆರ್‍ಎಲ್‍ಡಿ)ದ ತಬ್ಸಮ್ ಹಸನ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಮೃಗಾಂಕ್ ಸಿಂಗ್ ಪರಾಭವಗೊಂಡಿದ್ದಾರೆ.
ಆರ್‍ಎಲ್‍ಡಿ ಅಭ್ಯರ್ಥಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಸ ಹಾಗೂ ಅಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದ್ದವು.
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಭಾಂದಾರ-ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೇಮಂತ್ ಪಟ್ಲೆ ವಿಜಯದುಂದುಭಿ ಮೊಳಗಿಸಿದ್ದಾರೆ.
ಫಲ್ಘರ್ ಲೋಕಸಭಾ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ. ಕೇಸರಿ ಪಕ್ಷದ ಅಭ್ಯರ್ಥಿ ಗೋವಿತ್ ರಾಜೇಂದ್ರ ಧೇಡ್ಯಾ ಗೆಲುವಿನ ಮುಗುಳ್ನಗೆ ಬೀರಿದ್ದಾರೆ.
ಪಲುಸ್ ಕಡೇಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಉಮೇದುವಾರ ವಿಶ್ವಜೀತ್ ಪತಂಗರಾವ್ ಜಯಗಳಿಸಿದ್ದಾರೆ.
ನಾಗಾಲ್ಯಾಂಡ್ : ಈಶಾನ್ಯ ರಾಜ್ಯದ ನಾಗಲ್ಯಾಂಡ್ ಲೋಕಸಭಾ ಕ್ಷೇತ್ರ ಎನ್‍ಡಿಪಿಪಿ ಅಭ್ಯರ್ಥಿ ಟೊಖೆಹೋ ಜಯಶೀಲರಾಗಿದ್ದಾರೆ.
ಪಶ್ಚಿಮ ಬಂಗಾಳ : ಈ ರಾಜ್ಯದ ಮಹೇಶ್ವಾಲ್ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‍ನ ದುಲಾಲ್ ಚಂದ್ರ ದಾಸ್‍ಗೆ ವಿಜಯಲಕ್ಷಿ ಒಲಿದಿದ್ದಾಳೆ.
ಜಾರ್ಖಂಡ್ : ಪೂರ್ವ ಜಾರ್ಖಂಡ್‍ನ ಸಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಎಂಎಂ ಅಭ್ಯರ್ಥಿ ಸೀಮಾಮಹತೋ ಗೆಲುವಿನ ಚಿಹ್ನೆಯೊಂದಿಗೆ ಸಂಭ್ರಮಿಸಿದ್ದಾರೆ.
ಗೋವಿಯಾ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಹದೇವ್ ಲಾಲ್ ಸಿಂಗ್ ಪಾಲಾಗಿದೆ.
ಬಿಹಾರ : ಬಿಹಾರದ ಜೋಶಿಹಟ್‍ನಲ್ಲಿ ಆರ್‍ಜೆಡಿ ಅಭ್ಯರ್ಥಿ ಶಹನವಾಜ್ ಅಲಂ ವಿಜಯದ ನಗೆ ಬೀರಿದ್ದಾರೆ.
ಮೇಘಾಲಯ :
ಈಶಾನ್ಯ ರಾಜ್ಯದ ಅಂಪಟಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮಿಯಾನಿ ಡಿ. ಶಿರಾ ಅವರಿಗೆ ವಿಜಯದ ಹಾರ ಲಭಿಸಿದೆ.
ಕೇರಳ : ಕೇರಳದ ಚೆಂಗನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪಕ್ಷದ ಪ್ರಾಬಲ್ಯ ಸಾಧಿಸಿದ್ದು, ಸಿಪಿಎಂನ ಸಾಜಿ ಚೇರಿಯನ್ ಗೆದ್ದಿದ್ದಾರೆ.
ಪಂಜಾಬ್ : ಚಂಡಿಗಢದ ಶಹಾಕೋಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹರ್ದೇವ್ ಸಿಂಗ್ ಲಡಿ ಚುನಾಯಿತರಾಗಿದ್ದಾರೆ.
ಉತ್ತರಖಂಡ : ಈ ರಾಜ್ಯದ ತಾರಲಿ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಾಗಿದೆ. ಮಹಿಳಾ ಅಭ್ಯರ್ಥಿ ಮುನ್ನಿ ದೇವಿ ಶಾ ಆರಿಸಿ ಬಂದಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.