
ಬೆಂಗಳೂರು:ಮೇ-೩೧: 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಲುವ ಮುನ್ಸೂಚನೆ ದೊರೆಯುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ನಡೆದ ಲೋಕಸಭೆಯ ಉಪಚುನಾವಣೆಗಳಲ್ಲಿ ಮೋದಿ ವಿರೋಧಿ ಅಲೆ ಕಾಣುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆರ್ಆರ್ ನಗರ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆರ್ಆರ್ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಗೆಲುವು ನಿರೀಕ್ಷಿತ. ವಿಧಾನಸಭೆಗೆ ನಿಗದಿಪಡಿಸಿದ್ದ ಚುನಾವಣಾ ದಿನಾಂಕದಂದು ಆರ್ಆರ್ ನಗರದಲ್ಲೂ ಚುನಾವಣೆ ನಡೆದಿದ್ದರೆ, ಇದೇ ಫಲಿತಾಂಶ ಬರುತ್ತಿತ್ತು ಎಂದರು.
ದೇಶದ ಅನೇಕ ಭಾಗದಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗುತ್ತಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೋಲುವ ಮುನ್ಸೂಚನೆ ಇದಾಗಿದೆ. ಮೋದಿ ಅಲೆ ಈಗ ದೇಶದಲ್ಲಿ ಕಡಿಮೆಯಾಗುತ್ತಿದೆ ಎಂದರು.