
ಬೆಂಗಳೂರು, ಮೇ 30- ಸಾಲದ ಸುಳಿಗೆ ಸಿಲುಕಿರುವ ನಾಡಿನ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಆರೂವರೆ ಕೋಟಿ ಕನ್ನಡಿಗರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ರೈತ ಮುಖಂಡರು, ಪ್ರಗತಿಪರರ ಜತೆ ನಡೆಸಿದ ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ. ಯಾವುದೇ ಕಾರಣಕ್ಕೂ ಭರವಸೆಯಿಂದ ಹಿಂದೆ ಸರಿಯುವುದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮ ಹಿತ ಕಾಪಾಡಲು ನಾವು ಬದ್ಧವಾಗಿದ್ದೇವೆ ಎಂದು ಮನವಿ ಮಾಡಿದರು.
ಆತ್ಮಹತ್ಯೆ ಮಾಡಿಕೊಳ್ಳುವುದೇ ರೈತರಿಗೆ ಅಂತಿಮ ಪರಿಹಾರವಲ್ಲ. ಏನೇ ಸಮಸ್ಯೆಗಳಿದ್ದರೂ ಸರ್ಕಾರ ಪರಿಹರಿಸಲು ಬದ್ಧವಿದೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 10 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ಆಘಾತವಾಯಿತು. ಈಗಾಗಲೇ ಮುಖ್ಯಕಾರ್ಯದರ್ಶಿಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆರ್ಥಿಕ ಹೊರೆ ಹೊರಿಸಿ ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ಹೋಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನು ರೈತರನ್ನು ರಕ್ಷಣೆ ಮಾಡುವುದರ ಜತೆಗೆ ಖಜಾನೆಯನ್ನು ಭದ್ರವಾಗಿಡುವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸಮಜಾಯಿಸಿದರು.
ವಿಧಾನಸಭೆ ಚುನಾವಣೆಗೂ ಮುನ್ನ ನಾನು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು ನಿಜ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲ. ಆದರೆ, ಸಮ್ಮಿಶ್ರ ಸರ್ಕಾರ ಇರುವುದರಿಂದ ನನಗೆ ಕೆಲವು ಇತಿಮಿತಿಗಳಿವೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
53ಸಾವಿರ ಕೋಟಿ ಸಾಲ ಮನ್ನಾ ಮಾಡುವುದರಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸುವ ಬಗ್ಗೆ ಈಗಾಗಲೇ ಮುಖ್ಯಕಾರ್ಯದರ್ಶಿ, ಹಣಕಾಸು ಇಲಾಖೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರಿಂದ ಮಾಹಿತಿ ಪಡೆದಿದ್ದೇನೆ. ಯಾರಿಗೂ ಯಾವ ರೀತಿಯ ಅನುಮಾನ ಬೇಡ ಎಂದು ಮನವಿ ಮಾಡಿದರು.
ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಅದರಂತೆ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದರು.
ಇದು ನಾಡಿನ ಆರೂವರೆ ಕೋಟಿ ಜನರ ಹಿತ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದೇವೆ. ಎಂಥ ಪರಿಸ್ಥಿತಿಯಲ್ಲಿಯೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನತೆಗೆ ಮಾರಕವಾಗುವಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಅಧಿಕಾರದಲ್ಲಿರುವುದರಿಂದ ಪ್ರಮುಖ ನಿರ್ಧಾರಗಳನ್ನು ಚರ್ಚಿಸಿಯೇ ತೀರ್ಮಾನ ಕೈಗೊಳ್ಳಬೇಕು. ನಾವು ನಗರವನ್ನು ಕಡೆಗಣಿಸುತ್ತಿದ್ದೇವೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ನಮಗೆ ಗ್ರಾಮೀಣ ಭಾಗ ಎಷ್ಟು ಮುಖ್ಯವೋ, ನಗರ ಪ್ರದೇಶವೂ ಅಷ್ಟೇ ಮುಖ್ಯ. ಯಾವುದನ್ನೂ ಕೂಡ ಕಡೆಗಣಿಸದೆ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದೇವೆ ಎಂದು ಹೇಳಿದರು.
ಹಿಂದಿನ ಯುಪಿಎ ಸರ್ಕಾರ ರೈತರ 72ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಇದಕ್ಕಾಗಿ ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿ ಅವರನ್ನು ನಾನು ವಿಶೇಷವಾಗಿ ಅಭಿನಂದಿಸುವೆ. ಈಗಿನ ಸರ್ಕಾರದ ನಡವಳಿಕೆಗಳು ಹೇಗಿವೆ ಎಂಬುದು ನಿಮಗೆ ಗೊತ್ತಿಲ್ಲವೆ ಎಂದು ಎನ್‍ಡಿಎ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ರೈತರು ನೀಡುವ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಅಂತಿಮವಾಗಿ ಪರಮೇಶ್ವರ್ ಅವರ ಜತೆ ಚರ್ಚಿಸಿ ಸಾಲ ಮನ್ನಾ ಕುರಿತಂತೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದೇವೆ. ನಮ್ಮದು ರೈತಪರ ಸರ್ಕಾರ, ರೈತರ ಹಿತ ಕಾಪಾಡಲು ನಾನು ಯಾವಾಗಲೂ ಬದ್ಧರಾಗಿರುತ್ತೇವೆ ಎಂದು ಪುನರುಚ್ಚರಿಸಿದರು.
ರೈತರ ಸಾಲ ಮನ್ನಾ ಮಾಡಲು ಈ ಹಿಂದೆ ನೀಡಿದ್ದ ವಚನದಂತೆ ನಿಭಾಯಿಸಲಿದ್ದೇವೆ. ಸರ್ಕಾರ ಯಾವ ರೀತಿ ಸಾಲ ಮನ್ನಾ ಮಾಡಬೇಕು ಎಂಬೆಲ್ಲ ವಿಷಯಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಸಭೆಗೆ 30 ಜಿಲ್ಲೆಗಳ ರೈತ ಮುಖಂಡರು, ಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಆಗಮಿಸಿದ್ದರಿಂದ ಸಭೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತ ಮುಖಂಡರ ಬಳಿಗೆ ತೆರಳಿ ಕೈ ಕುಲುಕಿ ಸಭೆಗೆ ಸ್ವಾಗತ ಕೋರಿದರು. ನಂತರ ನಡೆದ ಸಭೆಯಲ್ಲಿ ರೈತರ ಸಲಹೆ ಪಡೆಯಲಾಯಿತು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕ ಗೋವಿಂದಕಾರಜೋಳ, ಮುಖಂಡರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶ್ಯಂಪೂರ್. ಸಾ.ರಾ.ಮಹೇಶ್, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್. ಕುರುಬೂರು ಶಾಂತಕುಮಾರ್, ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಹಣಕಾಸು ಇಲಾಖೆಯ ಅಧಿಕಾರಿಗಳು, ವಿವಿಧ ರೈತಪರ ಸಂಘಟನೆಗಳ ಮುಖಂಡರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.