ರೈತರು ಕೃಷಿ ಬೆಳೆ ಸಾಲ ಮನ್ನಾ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಣೆ

ಬೆಂಗಳೂರು, ಮೇ 30- ರಾಜ್ಯದ ರೈತರು ಕೃಷಿಗಾಗಿ ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಸಾಲ ಮನ್ನಾ ಸಂಬಂಧಪಟ್ಟಂತೆ ರೈತ ಮುಖಂಡರ, ಸಂಘಟನೆಗಳ ಸಭೆ ನಡೆಸಿದರು. ಸಭೆಯಲ್ಲಿ ಮುಕ್ತವಾದ ಚರ್ಚೆ ನಡೆಯಿತು.
ಕೊನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, 2009ರ ಏಪ್ರಿಲ್ 1ರಿಂದ 2017ರ ಡಿಸೆಂಬರ್ 31ರವರೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಮಾಡಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದರು.
ಮುಂದಿನ 15 ದಿನದಲ್ಲಿ ಸಾಲ ಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಿ ರೈತರ ಮನೆ ಬಾಗಿಲಿಗೆ ಋಣ ಮುಕ್ತ ಪತ್ರವನ್ನು ಕಳುಹಿಸಲಾಗುವುದು ಎಂದು ಹೇಳಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಸುಮಾರು 1ಲಕ್ಷ 14ಸಾವಿರ ಕೋಟಿ ರೈತರ ಸಾಲ ಇದೆ. ಅದರಲ್ಲಿ ಗೊಬ್ಬರ ಮಾರಾಟ ಮಾಡುವವನ ಸಾಲವೂ ಇದೆ. ಬೆಂಗಳೂರಿನಲ್ಲಿರುವ ಅಧಿಕಾರಿಗಳು ಮತ್ತು ಉದ್ಯಮಿಗಳು ಕೃಷಿ ಹೆಸರಿನಲ್ಲಿ ಕೋಟಿಗಟ್ಟಲೆ ಸಾಲ ಪಡೆದಿದ್ದಾರೆ. ಟ್ರ್ಯಾಕ್ಟರ್ ಖರೀದಿಯಲ್ಲಿ ಸಾಲ ಇದೆ. ನೂರು ಎಕರೆಯ ಕಾಫಿ ಎಸ್ಟೇಟ್ ಮಾಲೀಕರು ಮಾಡಿರುವ ಸಾಲವೂ ಇದೆ. ಈ ರೀತಿಯ ಸಾಲವನ್ನು ತೀರಿಸಬೇಕೇ ಅಥವಾ ಕೃಷಿ ಉದ್ದೇಶಕ್ಕಾಗಿ ಪಡೆದ ಸಾಲಗಳಿಗೆ ಆದ್ಯತೆ ನೀಡಬೇಕೆ ಎಂಬ ವಿಷಯಗಳ ಕುರಿತು ನಿಮ್ಮ ಸಲಹೆ ಪಡೆಯಲು ಇಂದು ಸಭೆ ಕರೆದಿದ್ದೇನೆ ಎಂದರು.
2005ರಲ್ಲಿ ಬ್ಯಾಂಕುಗಳು 1 ಲಕ್ಷ ಕೋಟಿ ಸಾಲ ನೀಡುತ್ತಿದ್ದವು. ಈಗ ದೇಶಾದ್ಯಂತ 10 ಲಕ್ಷ ಕೋಟಿ ಕೃಷಿ ಸಾಲ ನೀಡಿವೆ. ಹೀಗಾಗಿ ಸಾಲದ ಸಮಸ್ಯೆ ಹೆಚ್ಚಾಗಿದೆ. ಸಾಲ ಮನ್ನಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದೇನೆ. ಬಹಳಷ್ಟು ಸಾಲಗಳಿಗೆ ಇನ್‍ಪುಟ್ ಸಬ್ಸಿಡಿ ಇದೆ. ಎರಡನೆ ಹಂತದ ನಗರಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸಾಲ ಮಾಡಿ ಮಾರ್ಕೆಟಿಂಗ್ ಕೆಲಸ ಮಾಡಿದ್ದಾರೆ. ಅದು 1ಕೋಟಿ 14 ಲಕ್ಷಗಳಷ್ಟಾಗಿದೆ. ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ಎರಡು ವಿಭಾಗ ಮಾಡಿದ್ದು, ಮೊದಲನೆಯದು ಬೆಳೆ ಸಾಲ ಸಂಪೂರ್ಣ ಮನ್ನಾ ಆಗಲಿದೆ. ರೈತರು ಬೆಳೆಗಾಗಿ ಎಷ್ಟೇ ಸಾಲ ಮಾಡಿದ್ದರೂ ಮಿತಿಯನ್ನೂ ನೋಡದೆ ಮನ್ನಾ ಮಾಡಲಾಗುವುದು.

ಉಪಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿ, ಸಾಲ ಮನ್ನಾ ಮಾಡಲು ಕಾಂಗ್ರೆಸ್‍ನ ಬೆಂಬಲ ಇದೆಯೇ ಇಲ್ಲವೇ ಎಂಬ ಗೊಂದಲಗಳು ಕೇಳಿ ಬರುತ್ತಿವೆ. ಯಾರಿಗೂ ಅನುಮಾನವೇ ಬೇಡ. ರೈತರ ಸಾಲ ಮನ್ನಾಕ್ಕೆ ಕಾಂಗ್ರೆಸ್‍ನ ಸಂಪೂರ್ಣ ಬೆಂಬಲವಿದೆ. ಆದರೆ, ಯಾವ ಸ್ವರೂಪದ ಸಾಲಗಳನ್ನು ಮನ್ನಾ ಮಾಡಬೇಕು. ಯಾವ ಹಂತದ ರೈತರ ಸಾಲ ಮನ್ನಾ ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು.

ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಂಡ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲಿಯವರೆಗೂ ಕಾಲವಾಕಾಶ ಹಿಡಿಯಲಿದೆ. ರೈತರು ತಾಳ್ಮೆಯಿಂದ ಇರಬೇಕು. ಉತ್ತಮ ಆಡಳಿತಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ನಿಮ್ಮ ಸಲಹೆ, ಸೂಚನೆಗಳು ಅಗತ್ಯ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು ನಿಜ. ಸ್ಪಷ್ಟ ಬಹುಮತ ಬಂದಿದ್ದರೆ ಬಹುಶಃ ಅವರು ಆ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈಗ ಮೈತ್ರಿ ಸರ್ಕಾರ ಇದೆ. ಈಗ ನಮ್ಮ ವಿರೋಧ ಇಲ್ಲ. ರೈತರ ಬದುಕು ಅಸನಾಗಲು ಹಿಂದೆ ಮನಮೋಹನ್ ಸರ್ಕಾರ 72 ಕೋಟಿ ರೈತ ಸಾಲ ಮನ್ನಾ ಮಾಡಿತ್ತು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 8500ಕೋಟಿ ಸಾಲ ಮನ್ನಾ ಮಾಡಿದೆ. ಸಾಲ ಮನ್ನಾಕ್ಕೆ ನಮ್ಮ ಬೆಂಬಲವಿದೆ.
ಆದರೆ, ಮದುವೆಗೆ, ಕಾರು ಖರೀದಿಗೆ, ಒಡವೆ, ಬೈಕ್ ಖರೀದಿಗೆ ಮಾಡಿರುವ ಸಾಲವನ್ನೂ ಮನ್ನಾ ಮಾಡಬೇಕೆ ಎಂಬ ಗೊಂದಲಗಳಿವೆ. ಅವನ್ನೆಲ್ಲಾ ಪರಿಶೀಲನೆ ಮಾಡಲು ತಜ್ಞರ ಸಮಿತಿ ರಚಿಸುತ್ತಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ