5,600 ಕೋಟಿ ರೂ.ಗಳ ಎನ್‍ಎಸ್‍ಇಎಲ್ ಹಣ ದುರ್ಬಳಕೆ ಪ್ರಕರಣ

ನವದೆಹಲಿ/ಮುಂಬೈ, ಮೇ 30-ಸುಮಾರು 5,600 ಕೋಟಿ ರೂ.ಗಳ ಎನ್‍ಎಸ್‍ಇಎಲ್ ಹಣ ದುರ್ಬಳಕೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದೆ.
ಹಣ ದುರ್ಬಳಕೆ ತಡೆ ಕಾಯ್ಸೆ (ಪಿಎಂಎಲ್‍ಎ) ಅಡಿ ರಾಜಧಾನಿ ದೆಹಲಿ, ಚಂಡಿಗಢ (ಪಂಜಾಬ್), ಮುಂಬೈ (ಮಹಾರಾಷ್ಟ್ರ), ಅಹಮದಾಬಾದ್ (ಗುಜರಾತ್), ಮತ್ತು ಬೆಂಗಳೂರು(ಕರ್ನಾಟಕ) ನಗರಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ದಾಖಲೆಪತ್ರಗಳು ಮತ್ತು ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆ ಹಾಕಿದ್ದು, ತನಿಖೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯವು ಕಳೆದ ಐದು ವರ್ಷಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 2,800 ಕೋಟಿ ರೂ.ಗಳ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಿದೆ.
ನ್ಯಾಷನಲ್ ಸ್ಪಾಟ್ ಎಕ್ಸ್‍ಚೆಂಚ್ ಲಿಮಿಟೆಡ್(ಇಎಸ್‍ಇಎಲ್) ಹಗರಣ 2013ರಲ್ಲಿ ಬೆಳಕಿಗೆ ಬಂದಿತ್ತು. ಎಲೆಕ್ಟ್ರಾನಿಕ್ ವಸ್ತುಗಳನ್ನು ವಿನಿಮಯ ಮಾಡುವ ಈ ವಹಿವಾಟಿನಲ್ಲಿ 5,600 ಕೋಟಿ ರೂ.ಗಳಷ್ಟು ಅಕ್ರಮ ನಡೆದಿತ್ತು. ಹೂಡಿಕೆದಾರರು ಮತ್ತು ದಲ್ಲಾಳಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದರು.
ಇಂದು ಐದು ರಾಜ್ಯಗಳಲ್ಲಿ ನಡೆದ ದಾಳಿಗಳೊಂದಿಗೆ ಈ ಹಗರಣದ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ