ಬೆಂಗಳೂರು, ಮೇ 30-ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ (ಬಿಇಎಲ್) ವಾರ್ಷಿಕ ವಹಿವಾಟಿನಲ್ಲಿ ಈ ಬಾರಿ ಶೇ.14 ರಷ್ಟು ಹೆಚ್ಚಳವಾಗಿದ್ದು, ಕಳೆದ ಬಾರಿ 8,825 ಕೋಟಿ ಇದ್ದ ವಹಿವಾಟು 10,085 ಕೋಟಿಗೆ ಏರಿಕೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಬಿಇಎಲ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆ ಪ್ರಮಾಣದ ವಹಿವಾಟು ಹೆಚ್ಚಳವಾಗಿದ್ದರೂ, ಲಾಭಾಂಶ ಮಾತ್ರ ಏರಿಕೆಯಾಗಿಲ್ಲ. ಕಳೆದ ಬಾರಿ 2,029ಕೋಟಿಯಿದ್ದ ಲಾಭಾಂಶ ಈ ಬಾರಿ 1,948 ಕೋಟಿಗೆ ಇಳಿದಿದೆ. ತೆರಿಗೆಗೆ ಮುನ್ನ ಲಾಭಾಂಶದ ಅಂಕಿಅಂಶ ಮೇಲಿನಂತಿದ್ದರೆ, ತೆರಿಗೆ ನಂತರದಲ್ಲಿ ಕಳೆದ ಬಾರಿ 1548 ಇದ್ದ ಲಾಭಾಂಶ, ಈ ಬಾರಿ 1399ಕ್ಕೆ ಇಳಿದಿದೆ. ರಫ್ತು ಪ್ರಮಾಣದಲ್ಲೂ ಕುಸಿತ ಕಂಡಿದ್ದು, ಕಳೆದ ಬಾರಿ 65 ಮಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ 26 ಮಿಲಿಯನ್ ಡಾಲರ್ನಷ್ಟು ಮಾತ್ರ ಇದೆ ಎಂದರು.
ಬಿಇಎಲ್ನ ಪ್ರತಿ ಉದ್ಯೋಗಿಗೆ ಕಳೆದ ಬಾರಿ 90.83 ಲಕ್ಷ ಇದ್ದ ಟರ್ನ್ ಓವರ್ ಈ ಬಾರಿ 103.69ಕ್ಕೆ ಏರಿಕೆಯಾಗಿದೆ. ಸಂಶೋಧನೆ ಮತ್ತು ಅನ್ವೇಷಣೆ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಹಣ ವ್ಯಯಿಸಲಾಗಿದೆ. ಕಳೆದ ವರ್ಷ 777 ಕೋಟಿ ರೂ. ವ್ಯಯಿಸಿದ್ದು, ಈ ಬಾರಿ 988 ಕೋಟಿ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಿಇಎಲ್ನ ಒಟ್ಟಾರೆ ವಹಿವಾಟಿನಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡಿದ್ದರೂ ವಿವಿಧ ಕಾರಣಗಳಿಂದಾಗಿ ಲಾಭಾಂಶ ಕಡಿಮೆಯಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಉತ್ಪಾದನೆಯಲ್ಲಿ ಶೇ.85ರಷ್ಟನ್ನು ಪೂರೈಸಲಾಗುತ್ತಿದೆ. ಉಳಿದ ಶೇ.15ರಷ್ಟನ್ನು ಮಾರುಕಟ್ಟೆಗೆ ಒದಗಿಸಲಾಗುತ್ತಿದೆ. ಭವಿಷ್ಯದಲ್ಲಿ ಹೆಚ್ಚು ಉಪಯುಕ್ತವಾದ ಅಪರೂಪದ ತಂತ್ರಜ್ಞಾನವನ್ನು ಆಧರಿಸಿ ಬಿಇಎಲ್ ವಹಿವಾಟು ನಡೆಸುತ್ತಿದೆ ಎಂದು ಹೇಳಿದರು.
ಪ್ರಮುಖವಾಗಿ ರಕ್ಷಣಾ ಕ್ಷೇತ್ರದ ಉಪಕರಣಗಳೊಂದಿಗೆ ಈ ಮತಯಂತ್ರಗಳು ಆಕಾಶ್ ವೆಫನ್ಸ್ ಡಿಫೆನ್ಸ್, ರಡಾರ್(ಆಯುಧ ಪತ್ತೆ ಹಚ್ಚುವ ಸಲಕರಣೆ), ತ್ರಿಡೀ ಕಂಟ್ರೋಲರ್ (ಯದ್ಧ ಕ್ಷೇತ್ರವನ್ನು ನಿಗಾವಣೆಯಲ್ಲಿಡುವ ವ್ಯವಸ್ಥೆ) ಮತ್ತಿತರ ಅತ್ಯುನ್ನತ ತಂತ್ರಜ್ಞಾನ ಒಳಗೊಂಡ ದೇಶದ ರಕ್ಷಣಾ ಕ್ಷೇತ್ರದ ಸಲಕರಣೆಗಳನ್ನು ನಿರ್ಮಿಸುವುದರಲ್ಲಿ ಬಿಇಎಲ್ ಮೊದಲಿನಿಂದಲೂ ಮುಂಚೂಣಿಯಲ್ಲಿದ್ದು, ಇದರೊಂದಿಗೆ ಹೊಸ ಉಪಕರಣಗಳನ್ನು ಆವಿಷ್ಕರಿಸಲಾಗಿದೆ ಎಂದು ವಿವರಿಸಿದರು.
ದೇವನಹಳ್ಳಿ ಸಮೀಪ ಅತ್ಯುನ್ನತ ರಕ್ಷಣಾ ಕ್ಷೇತ್ರದ ಉಪಕರಣಗಳ ತಯಾರಿಕೆಗೆ ಹಾಗೂ ಏರೋಸ್ಪೇಸ್ಗೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಶೇ.26ರಷ್ಟು ವಹಿವಾಟು ನಡೆಸಲಾಗುತ್ತಿದ್ದು, ಶೇ.30ರಷ್ಟು ವಹಿವಾಟನ್ನು ತಾಂತ್ರಿಕ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ಈ ವಹಿವಾಟು ಪೂರ್ಣಗೊಂಡರೆ ಲಾಭಾಂಶ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
2018ರ ಏ.1 ರವರೆಗೆ 92 ಮಿಲಿಯನ್ ಡಾಲರ್ನಷ್ಟು ರಫ್ತು ಆದೇಶವಿದೆ. ಅತಿ ಹೆಚ್ಚು ಎಂಜಿನಿಯರ್ಗಳನ್ನು ಒಳಗೊಂಡಿರುವ ಕಂಪೆನಿ ನಮ್ಮದಾಗಿದ್ದು, ಅತಿ ಹೆಚ್ಚು ಮಂದಿಗೆ ತರಬೇತಿ ನೀಡುವ ಸಂಸ್ಥೆಯನ್ನೂ ಆರಂಭಿಸಲಾಗಿದೆ. ನೈಸರ್ಗಿಕ ವಿದ್ಯುತ್ ಉತ್ಪನ್ನ ಕ್ರಮಗಳನ್ನು ಅಳವಡಿಸಿಕೊಂಡಿರುವ ಕಂಪೆನಿ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಇಎಲ್ ನಿರ್ದೇಶಕರಾದ ಕೋಶಿಯಾ ಅಲೆಗ್ಸಾಂಡರ್, ಅಜಿತ್ ಕಲಘಟಗಿ, ನಟರಾಜ್, ಕೃಷ್ಣನ್, ಆನಂದಿ ರಾಮಸಿಂಗ್ ಮತ್ತಿತರರು ಉಪಸ್ಥಿತರಿದ್ದರು.