ಕಾಳಿ ದೇವಿಯಂತೆ ವೇಷ ಧರಿಸುತ್ತಿದ್ದ ವ್ಯಕ್ತಿ ಬರ್ಬರವಾಗಿ ಕೊಲೆ!

ನವದೆಹಲಿ, ಮೇ 29-ಕಾಳಿ ದೇವಿಯಂತೆ ವೇಷ ಧರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಕಾಲು ಅಲಿಯಾಸ್ ಕಾಲೌ ಎಂಬಾತ ಹತ್ಯೆಗೀಡಾದ ವ್ಯಕ್ತಿ. ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಮೂವರು ಬಾಲಕರಾಗಿದ್ದಾರೆ. ಇತರ ನಾಲ್ವರನ್ನು ನವೀನ್ (20), ಅಮನ್ ಕುಮಾರ್ ಸಿಂಗ್ (20), ಮೋಹಿತ್ ಕುಮಾರ್(25) ಹಾಗೂ ಸಜಲ್ ಕುಮಾರ್ ಮಹೇಶ್ವರಿ ಎಂದು ಗುರುತಿಸಲಾಗಿದೆ.
ಹತ್ಯೆಯಾದ ಕಾಲು ಅನಾಥ. ಕಲ್ಮಾಜಿ ಮಂಡಿಯ ಧರ್ಮಶಾಲೆಯಲ್ಲಿ ಬೆಳದಿದ್ದ ಈತ ಕಾಳಿಕಾದೇವಿಯ ಪರಮಭಕ್ತನಾಗಿದ್ದು, ತನ್ನನ್ನು ಕಾಳಿಯನ್ನಾಗಿ ಬಿಂಬಿಸಿಕೊಳ್ಳಲು ಪ್ರತಿ ಮಂಗಳವಾರ ಮತ್ತು ಶನಿವಾರ ದೇವಿಯಂತೆ ವಸ್ತ್ರಧರಿಸುತ್ತಿದ್ದ. ಅಲ್ಲದೇ ಮಂಗಳಮುಖಿಯರೊಂದಿಗೆ ಸೇರಿಕೊಂಡು ನೃತ್ಯ ಮಾಡುತ್ತಿದ್ದ.
ಎನ್‍ಸಿಐಸಿ ಅರಣ್ಯ ಪ್ರದೇಶದಲ್ಲಿ ಕಾಳಿ ದೇವಿಯ ಉಡುಪಿನಲ್ಲಿ ಆತ ಹೋಗುತ್ತಿದ್ದಾಗ ಪಾನಮತ್ತ ಆರೋಪಿಗಳು ಕಾಲುನನ್ನು ಅಡ್ಡಗಟ್ಟಿ ಆತನ ವೇಷ ನೋಡಿ ಛೇಡಿಸಿದರು. ನಾನು ಕಾಳಿದೇವಿಯ ಪ್ರತಿರೂಪ ನನ್ನನ್ನು ಗೇಲಿ ಮಾಡಬೇಡಿ ಎಂದು ಕಾಲು ಎಚ್ಚರಿಕೆ ನೀಡಿದ. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಆತನನ್ನು ಮನಸೋ ಇಚ್ಛೆ ಥಳಿಸಿ, ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದರು.
ಕಾಲುವಿನ ಶವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಎದೆ, ಮುಖ ಮತ್ತು ತಲೆಗೆ ಇರಿತದ ಗಾಯಗಳಾಗಿವೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಂತರ ಏಳು ಆರೋಪಿಗಳನ್ನು ಬಂಧಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ