ಸಂಪುಟ ವಿಸ್ತರಣೆಯಿಂದ ಉಂಟಾಗುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ತಂತ್ರ

ಬೆಂಗಳೂರು, ಮೇ 29- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಿಂದ ಉಂಟಾಗುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಕಾಂಗ್ರೆಸ್‍ನ 13 ಮಂದಿ ಶಾಸಕರಿಗೆ ಗಾಳ ಹಾಕಿ ಕಾದು ಕುಳಿತಿದೆ.
ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಬಹುಮತ ಸಾಬೀತಿಗೂ ಮುನ್ನ ಕಾಂಗ್ರೆಸ್‍ನ 11 ಮಂದಿಯ ಶಾಸಕರನ್ನು ಬಿಜೆಪಿಯ ಹಿರಿಯ, ಕಿರಿಯ ನಾಯಕರು ಸಂಪರ್ಕಿಸಿದ್ದರು.

ಆದರೆ, ಕಾಂಗ್ರೆಸ್‍ನ ನಾಯಕರು ಅದಕ್ಕೆ ಅವಕಾಶ ನೀಡದಂತೆ ಎಲ್ಲಾ ಶಾಸಕರನ್ನು ರೆಸಾರ್ಟ್‍ನಲ್ಲಿಟ್ಟು ಕಣ್ಗಾವಲು ಕಾಯುವ ಮೂಲಕ ಆಪರೇಷನ್ ಕಮಲವನ್ನು ವಿಫಲಗೊಳಿಸಿದ್ದರು.
ಆನಂತರದ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವ ಅಧಿವೇಶನವೂ ನಡೆಯಿತು.
ರೆಸಾರ್ಟ್‍ನಲ್ಲಿ ತಂಗಿದ್ದ ಕಾಂಗ್ರೆಸ್, ಜೆಡಿಎಸ್‍ನ ಎಲ್ಲಾ ಶಾಸಕರು ಒಟ್ಟಾಗಿ ಬಂದು ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆನಂತರ ಎರಡೂ ಪಕ್ಷಗಳ ಶಾಸಕರು ಸ್ವ ಕ್ಷೇತ್ರಗಳಿಗೆ ತೆರಳಿ ಕೆಲವರು ವಿಜಯೋತ್ಸವದಲ್ಲಿ ಭಾಗವಹಿಸಿದರೆ, ಇನ್ನೂ ಕೆಲವರು ಸಂಪುಟ ಸೇರುವ ಲಾಬಿ ನಡೆಸಿದ್ದಾರೆ.

ಈ ನಡುವೆ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಬಹುತೇಕ ಶಾಸಕರ ಜತೆ ಬಿಜೆಪಿಯ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ. ಕೇವಲ 34 ಸಚಿವ ಸ್ಥಾನಗಳು ಮಾತ್ರ ಲಭ್ಯವಿದ್ದು, ಅದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಈ ಎರಡು ಹುದ್ದೆಗಳು ಭರ್ತಿಯಾಗಿವೆ. ಬಾಕಿ ಇರುವ 32 ಸ್ಥಾನಗಳ ಪೈಕಿ ಕಾಂಗ್ರೆಸ್‍ಗೆ 21, ಜೆಡಿಎಸ್‍ಗೆ 11 ಸ್ಥಾನಗಳು ಮಾತ್ರ ಲಭ್ಯವಾಗಲಿವೆ.
ಕಾಂಗ್ರೆಸ್‍ನಲ್ಲಿ 76ಮಂದಿ, ಜೆಡಿಎಸ್‍ನಲ್ಲಿ 36 ಮಂದಿ ಸಂಪುಟ ಸ್ಥಾನದ ಆಕಾಂಕ್ಷಿಗಳಿದ್ದಾರೆ. 78 ಶಾಸಕರ ಸಂಖ್ಯಾಬಲದ ಕಾಂಗ್ರೆಸ್‍ನಲ್ಲಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದರೆ, ಜಮಖಂಡಿಯ ಸಿದ್ದುನ್ಯಾಮಗೌಡ ಅವರು ಅಪಘಾತದಿಂದ ಅಕಾಲಿಕ ಮರಣಹೊಂದಿದ್ದಾರೆ. ಬಾಕಿ ಇರುವ 76 ಶಾಸಕರ ಪೈಕಿ 21 ಮಂದಿಯನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭದ ಮಾತಾಗಿಲ್ಲ. ಎಲ್ಲಾ ಶಾಸಕರು ಸಚಿವರಾಗುವ ತವಕದಲ್ಲೇ ಇದ್ದಾರೆ.

ಅದರಲ್ಲೂ ಬಿಜೆಪಿ, ಜೆಡಿಎಸ್‍ನಿಂದ ಬಂದಿರುವ ಶಾಸಕರು ಮತ್ತು ಪಕ್ಷದ ಹಿರಿಯ ಶಾಸಕರ ನಡುವೆ ಪೈಪೆÇೀಟಿ ಜೋರಾಗಿದೆ. ಒಂದು ವೇಳೆ ಸಚಿವರಾಗಲು ಅವಕಾಶ ಸಿಗದೇ ಇದ್ದರೆ ನಡೆಯುವ ಭಿನ್ನಮತೀಯ ಚಟುವಟಿಕೆಗಳು ಮಿತಿ ಮೀರುವ ಸಾಧ್ಯತೆಗಳಿವೆ.
ಇದರ ಲಾಭ ಪಡೆಯಲು ಬಿಜೆಪಿಯ ನಾಯಕರು ಕಾಂಗ್ರೆಸ್‍ನ ಶಾಸಕರಾದ ಬಸವನಬಾಗೇವಾಡಿ ಕ್ಷೇತ್ರದ ಶಿವಾನಂದಪಾಟೀಲ, ಯಲ್ಲಾಪುರದ- ಶಿವರಾಮ್ ಹೆಬ್ಬಾರ್, ಭದ್ರಾವತಿ- ಡಿ.ಕೆ.ಸಂಗಮೇಶ್, ಹುಮ್ನಾಬಾದ್‍ನ- ರಾಜಶೇಖರ ಪಾಟೀಲ್, ಹಿರೇಕೇರೂರಿನ -ಬಿ.ಸಿ.ಪಾಟೀಲ್, ಬಳ್ಳಾರಿ- ನಾಗೇಂದ್ರ, ಕಂಪ್ಲಿ- ಜೆ.ಎನ್.ಗಣೇಶ್, ಹೊಸಪೇಟೆ- ಆನಂದ್‍ಸಿಂಗ್, ಹಗರಿಬೊಬ್ಬನಹಳ್ಳಿ- ಭೀಮನಾಯಕ್, ಮಸ್ಕಿ-ಪ್ರತಾಪ್‍ಗೌಡ ಪಾಟೀಲ್, ಹನೂರು- ನರೇಂದ್ರ, ಕುಂದಗೋಳು- ಎಸ್.ಶಿವಳ್ಳಿ ಅವರ ನಿರಂತರ ಸಂಪರ್ಕದಲ್ಲಿದ್ದಾರೆ.
ಇಷ್ಟೆ ಅಲ್ಲದೆ ಜೆಡಿಎಸ್‍ನ ಶಾಸಕರ ಸಂಪರ್ಕದಲ್ಲಿ ಮುಂದುರೆಸಿರುವುದು ಕುತೂಹಲ ಕೆರಳಿಸಿದೆ.

ಒಮ್ಮೆ ವಿಶ್ವಾಸ ಮತ ಸಾಬೀತಾದ ನಂತರ 6 ತಿಂಗಳ ಕಾಲ ಸರ್ಕಾರಕ್ಕೆ ಯಾವುದೇ ಅಪಾಯ ಎದುರಾಗುವುದಿಲ್ಲ. ಆದರೆ, ಆ 6 ತಿಂಗಳ ಅವಧಿಯೊಳಗೆ ಎಷ್ಟು ಸಾಧ್ಯವೋ ಅಷ್ಟು ಭಿನ್ನಮತಕ್ಕೆ ತುಪ್ಪ ಸುರಿದು ಸರ್ಕಾರವನ್ನು ಅಭದ್ರಗೊಳಿಸುವ ಚರ್ಚೆಗಳನ್ನು ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರೊಂದಿಗೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಈಗಾಗಿ ಸಂಪುಟ ವಿಸ್ತರಣೆಗೂ ಮುನ್ನವೇ ಖಾತೆ ಹಂಚಿಕೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರ ನಡುವೆ ತಗಾದೆ ಆರಂಭವಾಗಿದ್ದು, ಸಂಪುಟ ವಿಸ್ತರಣೆಯ ನಂತರ ಎರಡು ಪಕ್ಷಗಳ ಆಂತರಿಕ ಬೇಗುದಿ ಹೆಚ್ಚಾಗಬಹುದು ಎಂಬ ಆತಂಕದಿಂದ ಉಭಯ ಪಕ್ಷಗಳ ಮುಖಂಡರು ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಆರಂಭಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ