ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅನಾರೋಗ್ಯದಿಂದಾಗಿ ಸಲಗ ಮೃತ

ಹುಣಸೂರು, ಮೇ 29- ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅನಾರೋಗ್ಯದಿಂದಾಗಿ ಸುಮಾರು 48 ವರ್ಷದ ಸಲಗ ಮೃತಪಟ್ಟಿರುವ ಘಟನೆ ನಡೆದಿದೆ.
ಮತ್ತಿಗೋಡು ವಲಯದ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಐರಾವತ ಮೃತಪಟ್ಟಿದ್ದು, ಈ ಆನೆಯನ್ನು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‍ಪೇಟೆ ಸುತ್ತಮುತ್ತಲಿನಲ್ಲಿ ದಾಂಧಲೆ ನಡೆಸುತ್ತಿದ್ದ ವೇಳೆ 2017ರ ಜೂನ್‍ನಲ್ಲಿ ಸೆರೆ ಹಿಡಿದು ಇಲ್ಲಿಗೆ ತಂದು ಶಿಬಿರದಲ್ಲಿ ಆಶ್ರಯ ನೀಡಲಾಗಿತ್ತು.
ಮೇಯಲು ಬಿಟ್ಟಿದ್ದ ವೇಳೆ ಅಸ್ಪಸ್ಥನಾಗಿದ್ದ ಐರಾವತ ನಡೆಯಲು ಆಗುತ್ತಿರಲಿಲ್ಲ, ನಾಗರಹೊಳೆ ಉದ್ಯಾನದ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರಾದರೂ ಫಲಕಾರಿಯಾಗದೆ ಮೃತಪಟ್ಟಿದೆ.
ನಾಗರಹೊಳೆಯ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್ ಸಮ್ಮುಖದಲ್ಲಿ ನಾಗರಹೊಳೆ ಉದ್ಯಾನದ ಪಶು ವೈದ್ಯ ಡಾ.ಮುಜೀಬ್ ರೆಹಮಾನ್, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ಪಶು ಆಸ್ಪತ್ರೆಯ ಪಶು ವೈದ್ಯ ಡಾ.ಭವಿಷ್ಯಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಆ ವೇಳೆ ಆನೆಯ ಹೃದಯ ಭಾಗದಲ್ಲಿ ನೀರು ತುಂಬಿ ಕೊಂಡಿದ್ದು, ಹೈಡ್ರೋ ಪೆರಿಕಾರ್ಡಿನಾ ಕಾಯಿಲೆಯಿಂದ ಸತ್ತಿದೆ ಎಂದು ಶಂಕಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ