ಬೆಂಗಳೂರು, ಮೇ 29- ತಜ್ಞರ ವರದಿ ಆಧಾರದ ಮೇಲೆ ಎತ್ತಿನ ಹೊಳೆ ಯೋಜನೆಯನ್ನು ಕೈಎತ್ತಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಕೋಟಿ ಖರ್ಚಾಗಿದೆ. 13 ಸಾವಿರ ಕೋಟಿ ವೆಚ್ಚದ ಯೋಜನೆಯಲ್ಲಿ ಹುಡುಗಾಟಿಕೆ ಆಡಲು ಸಾಧ್ಯವಿಲ್ಲ ಎಂದು ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ವಿಷಯವಾಗಿ ಕೇಳಿಬಂದ ಆಕ್ಷೇಪಗಳು ಮತ್ತು ವಿರೋಧಗಳಿಗೆ ತಿರುಗೇಟು ನೀಡಿದ ಅವರು, ಇದು ಹುಡುಗಾಟಿಕೆಯ ವಿಷಯ ಅಲ್ಲ. ನೀರಿಲ್ಲ, ಯೋಜನೆ ಸಾಧುವಲ್ಲ ಎಂಬುದು ನಿಜವಾಗಿದ್ದರೆ ಅದು ಜಾರಿಯೇಗೊಳ್ಳುತ್ತಿರಲಿಲ್ಲ. ಈಗಾಗಲೇ ಸಾವಿರಾರು ಕೋಟಿ ಖರ್ಚು ಮಾಡಿದ್ದೇವೆ. 45 ಮೀಟರ್ ಪೈಪ್ಲೈನ್ ಅಳವಡಿಕೆಯಾಗಿದೆ. ಎರಡು ತಡೆಗೋಡೆಗಳ ಪೈಕಿ 6 ಗೋಡೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಮಾರು ಐದಾರು ಜಿಲ್ಲೆಗೆ ನೀರೊದಗಿಸುವ ಎತ್ತಿನ ಹೊಳೆ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಲು ಸಾಧ್ಯವೇ ಇಲ್ಲ. ಹೋರಾಟ ಮಾಡುವವರು ಮಾಡಿಕೊಳ್ಳಲಿ. ಯೋಜನೆ ಜಾರಿ ವಿಷಯದಲ್ಲಿ ಮಾತ್ರ ವೈಜ್ಞಾನಿಕವಾಗಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಕೆಲಸ ಪ್ರಗತಿಯಲ್ಲಿದ್ದು, ಇನ್ನೆರಡು ವರ್ಷದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಅವರು ತಿಳಿಸಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೊಲಾರ ಜಜಿಲ್ಲೆಗೆ ನೀರಾವರಿ ಒದಗಿಸುವ ಯರಗೋಳು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದು ಅರ್ಧಕ್ಕೆ ನಿಂತಿದ್ದು, ಅದರ ಪ್ರಗತಿಪರಿಶೀಲನೆಯೂ ನಡೆಯುತ್ತಿದೆ.
ಬೆಂಗಳೂರಿನ ಕೆಸಿವ್ಯಾಲಿಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಯೋಜನೆ ಬಹುತೇಕ ಪೂರ್ಣಗೊಳ್ಳಲಿದೆ. ಚುನಾವಣಾ ಕಾರಣದಿಂದ ಅದು ಕೆಲ ಕಾಲ ಸ್ತಗಿತಗೊಳಿಸಲಾಗಿತ್ತು. ಅದು ಶೀಘ್ರ ಅದನ್ನು ಲೋಕಾರ್ಪಣೆ ಮಾಡಬೇಕಾಗಿದೆ. ಈ ಮೂರು ಯೋಜನೆಗಳ ವಿಚಾರವಾಗಿ ಪ್ರಗತಿ ಪರಿಶೀಲನೆ ನಡೆಸಲು ಇಂದು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ ಎಂದು ಅವರು ಹೇಳಿದರು.
ವಿಧಾನಸಭೆಯ ಕಾರ್ಯದರ್ಶಿ ವಿರುದ್ಧ ಜಂಟಿ ಕಾರ್ಯದರ್ಶಿಯೊಬ್ಬರು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ಕುಮಾರ್, ನನಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಪೀಕರ್ ಸ್ಥಾನ ಎಂಬುದು ಅತ್ಯಂತ ಜವಾಬ್ದಾರಿಯುತವಾದದ್ದು, ಆತುರಕ್ಕೆ ಬಿದ್ದು ಹಗುರವಾಗಿ ಮಾತನಾಡಿದರೆ ಸ್ಥಾನದ ಗೌರವ ಕಡಿಮೆಯಾಗುತ್ತದೆ. ಪ್ರಕರಣದ ಸಂಬಂಧ ನನ್ನ ಬಳಿ ದಾಖಲೆ ಪತ್ರಗಳು ಬಂದರೆ ಮಾತ್ರ ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ. ಅನಗತ್ಯವಾಗಿ ಯಾರನ್ನೂ ತೇಜೋವಧ ಮಾಡಬಾರದು. ಒಂದು ವೇಳೆ ಲಿಖಿತವಾಗಿ ಮಾಹಿತಿ ಬಂದರೆ ಯಾರೇ ತಪ್ಪಿತಸ್ಥರ್ದಿರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ.ಯಾರ ವಿಷಯದಲ್ಲೂ ನಾನು ಪೂರ್ವಾಗ್ರಹಪೀಡಿತನಾಗಿಲ್ಲ. ನಿಶ್ಪಕ್ಷಪಾತವಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.